ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಜತೆಯಲ್ಲಿ ಮಾಜಿ ಸಂಸದ ಜಿ.ಮಾದೇಗೌಡ.
ಕೆ.ಎಂ.ದೊಡ್ಡಿ: ಕಾಳಮುದ್ದನದೊಡ್ಡಿಗೆ ಹೊಸ ರೂಪ ಕೊಟ್ಟ ಮಾಜಿ ಸಂಸದ ಡಾ.ಜಿ.ಮಾದೇಗೌಡ ಅವರು ಅಧಿಕಾರಕ್ಕಿಂತ ಅಭಿವೃದ್ಧಿಗೆ ಆದ್ಯತೆ ಕೊಟ್ಟವರು. ಮಾತ್ರವಲ್ಲದೆ ಬಹುಮುಖ್ಯವಾಗಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಗ್ರಾಮೀಣ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ದಾರಿಯಾದರು. ಜತೆಗೆ ಸಾವಿರಾರೂ ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟವರು.
ಮದ್ದೂರು ತಾಲೂಕಿನ ಗುರುದೇವರಹಳ್ಳಿಯ ಪುಟ್ಟೇಗೌಡ, ಕಾಳಮ್ಮ ದಂಪತಿ ಪುತ್ರನಾಗಿ 1928ರ ಜು.10ರಂದು ಜನಿಸಿದ ಜಿ.ಮಾದೇಗೌಡ ಅವರು ಸಾರ್ಥಕ ಬದುಕನ್ನು ನಡೆಸಿದವರು. ಕಾನೂನು ಪದವಿ ಮುಗಿಸಿದ ಜಿ.ಮಾದೇಗೌಡರು ಅನಿರೀಕ್ಷಿತವಾಗಿ ಚುನಾವಣ ಕಣಕ್ಕಿಳಿದವರು. ತಾಲೂಕು ಬೋರ್ಡ್ ಚುನಾವಣೆ ಮೂಲಕ ಅವರ ರಾಜಕೀಯ ಜೀವನ ಶುರುವಾಗುತ್ತದೆ. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ಜಿಲ್ಲೆಯಲ್ಲಿ ಸತತವಾಗಿ ಹಾಗೂ ಅತಿ ಹೆಚ್ಚು ಅವಧಿಗೆ ಶಾಸಕರಾಗಿರುವ ದಾಖಲೆಗೆ ಜಿ.ಮಾದೇಗೌಡ ಭಾಜನರಾಗಿದ್ದಾರೆ. ಅಂದರೆ, ಗೌಡರು 22 ವರ್ಷ ಶಾಸಕರಾಗಿ ಒಮ್ಮೆ ಸಚಿವ ಸ್ಥಾನ ಪಡೆದಿದ್ದು, ಬಳಿಕ 2 ಬಾರಿ ಲೋಕಸಭಾ ಸದಸ್ಯರಾಗಿದ್ದರು. ಜಿ.ಮಾದೇಗೌಡರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ರಾಜಕೀಯ ಜೀವನದಲ್ಲಿ ಶಿಕ್ಷಣ ಸಂಸ್ಥೆ ಜತೆಗೆ ಮತ್ತೊಂದಕ್ಕೆ ಸಮಯ ಮೀಸಲಿಟ್ಟಿದ್ದು ಅಂದರೆ ಅದು ಕಾವೇರಿ ಚಳವಳಿ.
ಕಾವೇರಿ ಸುಪುತ್ರ ಜಿ.ಮಾದೇಗೌಡ: ಮಂಡ್ಯ ಜಿಲ್ಲೆಯನ್ನು ಉಗ್ರವಾಗಿ ಕಾಡಿದ್ದ ಕಾವೇರಿ ನದಿ ನೀರಿನ ಹೋರಾಟಗಳಲ್ಲು ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದರು. ರಾಜ್ಯದಲ್ಲಿ ಸ್ವಪಕ್ಷ ಅಧಿಕಾರದಲ್ಲಿ ಇದ್ದಾಗಲೂ ಹೊಂದಾಣಿಕೆ ಮಾಡಿಕೊಳ್ಳದೆ, ಬೀದಿಗಿಳಿದು ಸರ್ಕಾರದ ವಿರುದ್ಧ ಗುಡುಗುತ್ತಿದ್ದರು. ಮುಂಗೋಪಿ ಆಗಿದ್ದ ಗೌಡರು, ಯಾರನ್ನು ಮುಲಾಜಿಗೆ ಹಾಕಿಕೊಳ್ಳುತ್ತಿರಲಿಲ್ಲ. ಅದು ಸಿಎಂ ಆಗಲಿ, ಕೇಂದ್ರ ಮಂತ್ರಿ ಇರಲಿ, ಡಿಸಿ, ಎಸ್ಪಿ ಯಾರೇ ಆಗಿರಲಿ ಅವರದೇ ದಾಟಿಯಲ್ಲಿ ಚಳಿ ಬಿಡಿಸುತ್ತಿದ್ದರು. ಗೌಡರು ಹೊಂದಾಣಿಕೆ ಮಾಡಿಕೊಂಡಿದ್ದರೆ, ರಾಜಕಾರಣದಲ್ಲಿ ಅತ್ಯುನ್ನತ ಸ್ಥಾನ ಗಳಿಸುತ್ತಿದ್ದರು. ಎಸ್.ಎಂ.ಕೃಷ್ಣ ಹಾಗೂ ಗೌಡರು ಒಟ್ಟಿಗೆ ಸಾಗಿದ್ದರೆ, ಮಂಡ್ಯ ಅಂದ್ರೆ ಇಂಡಿಯಾ ಅನ್ನುವ ಮಾತು ಮತ್ತಷ್ಟು ಜೋರಾಗಿ ಮಾರ್ದನಿಸುತ್ತಿತ್ತು.