ಪಾಂಡವಪುರ ತಾಲೂಕು ಕ್ಯಾತನಹಳ್ಳಿಯಲ್ಲಿ ನೂತನವಾಗಿ ಪ್ರಾರಂಭವಾದ ಪೊಲೀಸ್ ಠಾಣೆ ಸಿಬ್ಬಂದಿಯೊಂದಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಗಂಗಾಧರಸ್ವಾಮಿ, ಶಾಂತಮಲ್ಲಪ್ಪ ಇದ್ದರು. 
ಮಂಡ್ಯ

ಕ್ಯಾತನಹಳ್ಳಿ ನೂತನ ಪೊಲೀಸ್ ಠಾಣೆ ಉದ್ಘಾಟನೆ

ಪಾಂಡವಪುರ: ತಾಲೂಕಿನ ಕ್ಯಾತನಹಳ್ಳಿಯ ಪೊಲೀಸ್ ಹೊರ ಠಾಣೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು, ನೂತನ ಪೊಲೀಸ್ ಠಾಣೆಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭಾನುವಾರ ಉದ್ಘಾಟಿಸಿದರು.
ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ತಾಲೂಕಿನ ಹಲವು ಗ್ರಾಮಗಳು ಶ್ರೀರಂಗಪಟ್ಟಣದ ಗ್ರಾಮಾಂತರ ಮತ್ತು ಕೆಆರ್‌ಎಸ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿದ್ದವು. ಇದರಿಂದ ಈ ಭಾಗದ ಜನರು ದೂರದ ಠಾಣೆಗಳಿಗೆ ತೆರಳಬೇಕಿತ್ತು. ಸ್ಥಳೀಯವಾಗಿರುವ ಕಾನೂನು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅನುಕೂಲವಾಗುವಂತೆ ದೊಡ್ಡ ಗ್ರಾಮವಾದ ಕ್ಯಾತನಹಳ್ಳಿಯಲ್ಲಿ ನೂತನ ಪೊಲೀಸ್ ಠಾಣೆ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಠಾಣೆ ವ್ಯಾಪ್ತಿಗೆ ಸೇರಿರುವ ಎಲ್ಲ ಗ್ರಾಮದ ಜನರಿಗೂ ಠಾಣೆಯ ಸೇವೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಕ್ಯಾತನಹಳ್ಳಿ ಠಾಣೆ ವ್ಯಾಪ್ತಿಗೆ ಕ್ಯಾತನಹಳ್ಳಿ, ಹರವು, ಅರಳಕುಪ್ಪೆ, ಡಿಂಕಾ, ಬನ್ನಂಗಾಡಿ, ಕಟ್ಟೇರಿ, ಅಲ್ಪಹಳ್ಳಿ, ಮಲ್ಲಿಗೆರೆ, ಬೇಬಿ, ಬೇಬಿ ಬೆಟ್ಟದ ಕಾವಲು, ಕಣಿವೆ ಕೊಪ್ಪಲು, ಶ್ಯಾದನಹಳ್ಳಿ, ಹುಲ್ಕೆರೆ, ಹುಲ್ಕೆರೆ ಕೊಪ್ಪಲು, ಡಿಂಕಶೆಟ್ಟಹಳ್ಳಿ, ಸುಂಡಳ್ಳಿ, ಕಾವೇರಿಪುರ, ಹಾಗನಹಳ್ಳಿ, ಕನ್ನಂಬಾಡಿ ಸೇರಿದಂತೆ ಒಟ್ಟು 34 ಗ್ರಾಮಗಳು ಸೇರುತ್ತವೆ ಎಂದು ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕ್ಯಾತನಹಳ್ಳಿಯಲ್ಲಿ ಪ್ರಾರಂಭವಾಗಿರುವ ಪೊಲೀಸ್ ಠಾಣೆಯಲ್ಲಿ ಇಂದಿನಿಂದಲೇ ಕರ್ತವ್ಯ ಆರಂಭವಾಗುತ್ತದೆ. ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆಗೆ ಅಗತ್ಯವಿರುವ ಸೂಕ್ತ ಕಟ್ಟಡ ನಿರ್ಮಿಸಿ ಹೆಚ್ಚುವರಿ ವ್ಯವಸ್ಥೆ ಕಲ್ಪಿಸಲಾಗುವುದು. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ್ದ 15, ಕೆಆರ್‌ಎಸ್ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ್ದ 13 ಹಾಗೂ ಪಾಂಡವಪುರ ಪೊಲೀಸ್ ಠಾಣೆಗೆ ಸೇರಿದ್ದ 6 ಗ್ರಾಮಗಳು ಸೇರಿದಂತೆ ಒಟ್ಟು 34 ಗ್ರಾಮಗಳನ್ನು ಕ್ಯಾತನಹಳ್ಳಿ ಪೊಲೀಸ್ ಠಾಣೆ ಕಾರ್ಯ ವ್ಯಾಪ್ತಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.
ಠಾಣೆಗೆ ಒಬ್ಬ ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಮೂವರು ಸಹಾಯಕ ಸಬ್ ಇನ್‌ಸ್ಪೆಕ್ಟರ್, ಮೂವರು ಹೆಡ್ ಕಾನ್‌ಸ್ಟೇಬಲ್, ಎಂಟು ಜನ ಕಾನ್‌ಸ್ಟೇಬಲ್‌ಗಳು ಸೇರಿದಂತೆ ಒಟ್ಟು 20 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಡಿವೈಎಸ್‌ಪಿ ಶಾಂತಮಲ್ಲಪ್ಪ, ಪಾಂಡವಪುರ ಪೊಲೀಸ್ ಇನ್‌ಸ್ಪೆಕ್ಟರ್ ಶರತ್‌ಕುಮಾರ್, ಸಿಪಿಐ ವಿವೇಕಾನಂದ, ಜಿ.ಕುಮಾರ್, ಅನಂತ್‌ಕುಮಾರ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಆರ್.ಬಿ.ಉಮೇಶ್, ಲಿಂಗರಾಜು, ರಕ್ಷಿತಾ ಇದ್ದರು.