ಮಂಡ್ಯ ನಗರದಲ್ಲಿ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನವನ್ನು ಆಚರಿಸಲಾಯಿತು.
- ನಗರದಲ್ಲಿ ಪೊಲೀಸ್ ಧ್ವಜ ದಿನಾಚರಣೆ
- ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜನೆ
ಮಂಡ್ಯ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ, ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿ ನಾಗರಿಕ ಆಸ್ತಿಪಾಸ್ತಿಗಳನ್ನು ಕಾಪಾಡಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವುದು ಇಲಾಖೆಯ ಕರ್ತವ್ಯ ಎಂದು ನಿವೃತ್ತ ಆರಕ್ಷಕ ಉಪ ನೀರಿಕ್ಷಕ ದಾಸಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಅವರು ನಾಡಗೀತೆಯ ಸಾಲಿನಲ್ಲಿ ಕರ್ನಾಟಕದ ಸರ್ವ ಜನಾಂಗ ತೋಟ ಎಂದು ಹೇಳಿದ್ದಾರೆ. ಅದರಂತೆ ಸರ್ವ ಜನಾಂಗ ತೋಟವನ್ನು ರಕ್ಷಣೆ ಮಾಡುವ ಕೆಲಸ ನಮ್ಮ ಪೊಲೀಸ್ ಇಲಾಖೆಯ ಕರ್ತವ್ಯ ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿಗಳು ಸೈಬರ್ ಅಪರಾಧ, ನೈಸರ್ಗಿಕ ವಿಪತ್ತು ಹಾಗೂ ಕಾನೂನು ವ್ಯವಸ್ಥೆಯನ್ನು ಕಾಪಾಡುವಲ್ಲಿ ಮಾದರಿಯಾಗಿದ್ದು, ಮಂಡ್ಯ ಜಿಲ್ಲೆಯು ಕೂಡ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಮಂಡ್ಯ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಮುಂದುವರೆದಿದೆ. ಜತೆಗೆ ಪ್ರಸಿದ್ಧ ಪ್ರವಾಸಿ ತಾಣ ಹೊಂದಿದೆ. ಮಂಡ್ಯ ಮಣ್ಣಿನ ಸೊಬಗು ವಿಶಿಷ್ಟವಾದದ್ದು. ಜಿಲ್ಲೆಯನ್ನು ಸ್ವಚ್ಛ ನಗರಿಯನ್ನಾಗಿ ಮಾಡಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಕರ್ತವ್ಯ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಗೆ ಬಂದ ಪ್ರಯುಕ್ತ ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುವುದು. ಪರಿಶ್ರಮದಿಂದ ಕೆಲಸ ನಿರ್ವಹಿಸಿ ಇಲಾಖೆ ನಿವೃತ್ತಿ ಹೊಂದಿದ ಎಲ್ಲ ದರ್ಜೆಯ ನೌಕರರು ಮತ್ತು ಸಿಬ್ಬಂದಿ ಸೇವೆ ಸ್ಮರಿಸಿ ಈ ದಿನವನ್ನು ಗೌರವಿಸಲಾಗುತ್ತದೆ. ಪೊಲೀಸ್ ಇಲಾಖೆ ಅಧಿಕಾರಿಗಳು ಸೇವೆಯಲ್ಲಿ ವಿರಾಮವಿಲ್ಲದೆ ನಿಂದನೆಗೆ ಒಳಗಾಗಿ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯನ್ನು ಅನುಭವಿಸುತ್ತಾರೆ. ಸೇವೆಗಳನ್ನು ಮುಗಿಸಿ ನಿವೃತ್ತರಾಗಿರುತ್ತಾರೆ. ಆದ್ದರಿಂದ ಪ್ರತಿ ವರ್ಷ ನಿವೃತ್ತ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಗೌರವ ಸೂಚಿಸುವ ಸಲುವಾಗಿ ಕಾರ್ಯಕ್ರಮವನ್ನು ಮಾಡಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಧ್ವಜವನ್ನು ಮಾರಾಟ ಮಾಡಿ ಬಂದಂತಹ ಹಣವನ್ನು ನಿಧಿ ರೂಪದಲ್ಲಿ ನಿವೃತ್ತ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ವೈದ್ಯಕೀಯ ಸೌಲಭ್ಯ ಹಾಗೂ ಅಂತ್ಯಸಂಸ್ಕಾರಕ್ಕಾಗಿ ಧನ ಸಹಾಯ ಮಾಡಲಾಗುತ್ತದೆ. ಧ್ವಜ ಮಾರಾಟ ಮಾಡಿದ ಮೊತ್ತದಲ್ಲಿ ಶೇ.50ರಷ್ಟನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿ ಖಾತೆಗೆ ಹಾಗೂ ಶೇ.50ರಷ್ಟನ್ನು ಕೇಂದ್ರ ನಿವೃತ್ತಿ ಕಲ್ಯಾಣ ನಿಧಿಗೆ ಪಾವತಿಸಲಾಗುತ್ತದೆ. 2025 ಏ.1ರಿಂದ 2026 ಮಾ.31ರವರೆಗೆ 27 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-1 ಸಿ.ಇ.ತಿಮ್ಮಯ್ಯ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ ಇದ್ದರು.