ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಶಾಸಕರಾದ ಕೆ.ಎಂ.ಉದಯ್, ದಿನೇಶ್‌ಗೂಳಿಗೌಡ ಚಾಲನೆ ನೀಡಿದರು. ಡಾ.ಕೆಂಪಮ್ಮ, ಸುನೀಲ್‌ಕುಮಾರ್, ಅಪೂರ್ವಚಂದ್ರು, ಪ್ರಸನ್ನ ಇದ್ದರು.  
ಮಂಡ್ಯ

ಕಾವ್ಯ ಸಂಪತ್ತು ಸೃಷ್ಟಿಸುವ ಕವಿಗಳು, ಸಾಹಿತಿಗಳು

ಪ್ರಮುಖ ಮುಖ್ಯಾಂಶಗಳು

  • ಶ್ರೀ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಣ್ಣನೆ
  • ಮದ್ದೂರಲ್ಲಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ
ಮದ್ದೂರು: ಜಗತ್ತನ್ನು ಭಗವಂತ ಸೃಷ್ಟಿಸಿದರೇ ಕಾವ್ಯವೆಂಬ ಮಹಾ ಸಂಪತ್ತನ್ನು ಕವಿ ಮತ್ತು ಸಾಹಿತಿಗಳು ಸೃಷ್ಟಿಸುತ್ತಾರೆ ಎಂದು ಶ್ರೀ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಉದಯ್ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನಿಂದ ಗುರುವಾರ ಆಯೋಜಿಸಿದ್ದ 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಬ್ರಹ್ಮದೇವ ತಮಗೆ ಬೇಕಾದ ರೀತಿಯಲ್ಲಿ ಜಗತ್ತನ್ನು ಸೃಷ್ಟಿಸಿದರೇ ಕವಿಗಳು ಸುತ್ತಮುತ್ತಲಿನ ಸಮಾಜವನ್ನು ಅದಕ್ಕೆ ಪೂರಕವಾದ ಸಾಹಿತ್ಯವನ್ನು ಸೃಷ್ಟಿ ಮಾಡುತ್ತಾರೆ. ಒಬ್ಬ ಕವಿ, ಸಾಹಿತಿ ಎಷ್ಟು ಪುಸ್ತಕ ಬರೆದಿದ್ದಾರೆ ಎನ್ನುವುದಿಲ್ಲ. ಆ ಪುಸ್ತಕಗಳನ್ನು ಓದಿದ ಮೇಲೆ ಎಷ್ಟು ಜನರ ಮನಸ್ಸು ಪರಿವರ್ತನೆ ಆಗಿದೆ ಎನ್ನುವುದು ಸಾಹಿತ್ಯ ಮೂಲಕ ತಿಳಿಯಲಿದೆ ಎಂದರು.
ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಸಾಹಿತ್ಯ ಕ್ಷೇತ್ರದ ಹಿರಿಮೆಗೆ ಸಾಕ್ಷಿ. ಕನ್ನಡ ಭಾಷೆಯನ್ನು ಸಾಗರದಾಚೆಗೂ ವಿಸ್ತರಿಸಿದ ಕೀರ್ತಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳದ್ದು. ಶ್ರೀಗಳು ಕಾಲವಾಗುವ ಮೂರು ತಿಂಗಳ ಮೊದಲು ಅಮೆರಿಕದಲ್ಲಿ ಶ್ರೀಮಠದಿಂದ ಶಾಖೆಯನ್ನು ನಿರ್ಮಾಣ ಮಾಡಿದ್ದರು. ಅಕ್ಕ ಎಂಬ ಸಂಸ್ಥೆಯ ಮೂಲಕ ಅಮೆರಿಕದಲ್ಲಿ ನೆಲೆಸಿರುವ ಕನ್ನಡಾಭಿಮಾನಿಗಳಿಗೆ ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡ ಭಾಷೆಯನ್ನು ಮತ್ತಷ್ಟು ಪಸರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಅಕ್ಕ ಸಂಸ್ಥೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ 12 ದಿನಗಳ ಹಿಂದೆಯಷ್ಟೆ ಅಕ್ಕ ಸಮ್ಮೇಳನ ಆಯೋಜಿಸಲಾಗಿತ್ತು. ನಮ್ಮ ಆಧುನಿಕ ಭಾಷೆಯ ಜತೆಗೆ ಸಂಸ್ಕೃತಿ, ಧಾರ್ಮಿಕ ಆಚರಣೆ ಉಳಿಯಬೇಕಾದರೆ ಇಂತಹ ಸಾಹಿತ್ಯ ಸಮ್ಮೇಳನಗಳು ಹೆಚ್ಚಬೇಕು ಎಂದು ಆಶಿಸಿದರು.
ಹಳೇ ಮೈಸೂರು ಪ್ರಾಂತ್ಯದಲ್ಲಿ ಕನ್ನಡ ಹೆಚ್ಚು ಬಳಕೆ:
ಸಮ್ಮೇಳನದ ನೇತೃತ್ವಹಿಸಿದ್ದ ಶಾಸಕ ಕೆ.ಎಂ.ಉದಯ್ ಮಾತನಾಡಿ, 3 ವರ್ಷಗಳಿಂದ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರಲಿಲ್ಲ. ಹೀಗಾಗಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದಲ್ಲೇ ತಾಲೂಕು ಕ್ರೀಡಾಂಗಣದಲ್ಲಿ ಗಣೇಶೋತ್ಸವ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸಲು ತೀರ್ಮಾನಿಸಲಾಯಿತು ಎಂದರು.
ನಮ್ಮ ರಾಜ್ಯದಲ್ಲಿ 6 ಕೋಟಿಗೂ ಹೆಚ್ಚಿನ ಜನಸಂಖ್ಯೆ ಇದೆ. ಆದರೆ, ಅರ್ಧದಷ್ಟು ಜನ ಅನ್ಯ ಭಾಷಿಕರಾಗಿದ್ದಾರೆ. ಕನ್ನಡ ಭಾಷೆಯನ್ನು ಹೆಚ್ಚು ಮಾತನಾಡುತ್ತಿರುವುದು ಹಳೇ ಮೈಸೂರು ಪ್ರಾಂತ್ಯದಲ್ಲಿ ಮಾತ್ರ. ಪ್ರತಿಯೊಬ್ಬರೂ ಕನ್ನಡ ಮಾತನಾಡಬೇಕು. ನಮ್ಮ ನೆಲ, ಜಲ, ಭಾಷೆಯನ್ನು ಉಳಿಸಲು ಎಲ್ಲರೂ ಕಂಕಣ ಬದ್ಧರಾಗಬೇಕೆಂದು ಕರೆ ನೀಡಿದರು.
ಸರ್ಕಾರಿ ಶಾಲೆ ಉಳಿಸುವುದು ಅವಶ್ಯ:
ಸಮ್ಮೇಳನಾಧ್ಯಕ್ಷೆ ಡಾ.ಎಂ.ಕೆಂಪಮ್ಮ ಮಾತನಾಡಿ, ಬ್ಯಾಂಕಿಂಗ್ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಕನ್ನಡ ಬಳಕೆಯಾಗಬೇಕು ಎಂದ ಅವರು ದೇಶಕ್ಕೇ ಅನ್ನ ನೀಡುವ ರೈತ ಕುಟುಂಬದ ಯುವಕರಿಗೆ ಈಗಿನ ಕಾಲದಲ್ಲಿ ಹೆಣ್ಣು ಸಿಗದೇ ಇರುವುದು ಶೋಚನೀಯವಾಗಿದ್ದು, ಈ ವಿಷಯದಲ್ಲಿ ಸಮಾಜದ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದರು. 1963ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದವರು ಮದ್ದೂರಿನವರೇ ಆದ ರಾಮಮೂರ್ತಿ. ಹಳದಿ ಕೆಂಪು ಬಣ್ಣದ ಕನ್ನಡ ಬಾವುಟವನ್ನು ಕನ್ನಡ ನಾಡಿಗೆ ಪರಿಚಯಿಸಿದವರು ಅವರೇ ಆಗಿದ್ದು ಅದರ ಕೀರ್ತಿ ಕೂಡ ಅವರಿಗೆ ಸಲ್ಲಬೇಕು ಎಂದರು.
ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಲು ಪ್ರಯತ್ನಿಸಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಬೇಕು ಮುಂದಾಗಬೇಕು. ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಹೆತ್ತ ತಾಯಿಯಂತೆ ಪ್ರೀತಿಸಬೇಕು ಎಂದರು.
ಎಸ್.ಎಂ.ಕೃಷ್ಣ ಜಿಲ್ಲೆಗೆ ಕೀರ್ತಿ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಸುಂದರಾ ಮಾತನಾಡಿ, ಪುಣ್ಯ ಕೋಟಿ ಗೋವಿನ ಹಾಡು ನಾಡಿನ ಪ್ರತಿಯೊಬ್ಬರಿಗೂ ಗೊತ್ತು. ಅದರಲ್ಲೂ ಮಕ್ಕಳಿಗೆ ಅತ್ಯಂತ ಪ್ರಿಯವಾದ ಹಾಡಾಗಿದ್ದು ಇದನ್ನು ಅಜ್ಞಾತ ಕವಿ ಬರೆದಿದ್ದು. ಈ ಕವಿ ನಮ್ಮ ತಾಲೂಕಿನವರು ಎಂಬುವುದನ್ನು ಪ್ರತಿಯೊಬ್ಬರು ಹೆಮ್ಮೆ ಪಡುವ ವಿಷಯವಾಗಿದೆ ಎಂದರು. ತಾಲೂಕಿನವರೇ ಆದ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿ, ಕೇಂದ್ರ ವಿದೇಶಾಂಗ ಮಂತ್ರಿ ಸೇರಿದಂತೆ ಹಲವು ಅತ್ಯುನತ ಹುದ್ದೆಗಳನ್ನು ಅಲಂಕರಿಸಿ ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇದೇ ರೀತಿ ಹಲವು ಗಣ್ಯರು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಶಾಸಕ ಕೆ.ಎಂ.ಉದಯ್ ಅವರು ಉತ್ತಮ ಕೆಲಸಗಳನ್ನು ಮಾಡುವ ಜತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಂಸ್ಕೃತಿಕ ರಾಯಬಾರಿ ಎನಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಂಎಲ್‌ಸಿ ದಿನೇಶ್ ಗೂಳಿಗೌಡ ಮಾತನಾಡಿ, ಸಾಹಿತ್ಯ ಸಮ್ಮೇಳನಗಳಲ್ಲಿ ನಾಡು, ನುಡಿ, ಕಲೆ, ಸಾಹಿತ್ಯದ ಕುರಿತು ಚರ್ಚೆ ನಡೆಸುವುದರ ಜತೆಗೆ ರೈತರ ಬದುಕು, ಬವಣೆ ಬಗ್ಗೆ ಕೂಡ ವಿಚಾರಗೋಷ್ಠಿಯಲ್ಲಿ ಚರ್ಚೆಯಾಗಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗಮನ ಸೆಳೆದ ಮೆರವಣಿಗೆ: ನಗರದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲದ ಆವರಣದಲ್ಲಿ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಚಾಲನೆ ನೀಡಿದರು. ದೇಗುಲದ ಆವರಣದಿಂದ ತಾಲೂಕು ಕ್ರೀಡಾಂಗಣದವರೆಗೆ ಸಮ್ಮೇಳನಾಧ್ಯಕ್ಷರಾದ ಡಾ.ಎಂ.ಕೆಂಪಮ್ಮ ಅವರನ್ನು ಬೆಳ್ಳಿ ರಥದಲ್ಲಿ ಕುಳಿಸಿಕೊಂಡು ಡೊಳ್ಳು ಕುಣಿತ, ಪೂಜಾಕುಣಿತ, ಪಟದ ಕುಣಿತ, ಕೋಲಾಟ, ವೀರಗಾಸೆ ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳು ಹಾಗೂ ಇದೇ ಮೊದಲ ಬಾರಿಗೆ ಪೊಲೀಸ್ ಬ್ಯಾಂಡ್ ಹಾಗೂ ಸುಮಾರು 1500 ವಿದ್ಯಾರ್ಥಿಗಳು ಪಥ ಸಂಚಲನದ ಮೂಲಕ ಕರೆ ತಂದಿದ್ದು ಸಾಹಿತ್ಯಾಸ್ತಕರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸುಮಾರು 300 ಅಡಿಯ ಉದ್ದದ ಕನ್ನಡ ಧ್ವಜವನ್ನು ಹಿಡಿದು ಕೊಂಡು ಬಂದಿದ್ದು ಮನ ಮೋಹಕವಾಗಿತ್ತು.