ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕವನ ಸಂಕಲನವನ್ನು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಬಿಡುಗಡೆ ಮಾಡಿದರು.  
ಮಂಡ್ಯ

ಕಾವ್ಯ ಕವಿಗಿಂತಲೂ ದೊಡ್ಡದು: ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅಭಿಮತ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಕವನ ಸಂಕಲನ ಬಿಡುಗಡೆ
  • ಕರ್ನಾಟಕ ಸಂಘ, ಸಿರಿ ಪ್ರಕಾಶನದ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಕವಿಯ ಪ್ರತಿಬಿಂಬವೇ ಕಾವ್ಯವಾಗಿದೆ. ಗೀಚಿದ್ದೆಲ್ಲವೂ ಕವಿತೆಗಳಾಗುವುದಿಲ್ಲ. ಆದರೆ ವೈಯಕ್ತಿಕ ಅನುಭವವು ಸಾರ್ವತ್ರಿಕ ಅನುಭವವಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಸನ್ನಿವೇಶಗಳನ್ನು ಕವಿಗಳು ಸೃಷ್ಟಿಸಿಕೊಡಬೇಕು ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಸಲಹೆ ನೀಡಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಸಿರಿ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ವೈದ್ಯ ಡಾ.ಚಂದ್ರಶೇಖರ್ ಅವರ ‘ಹೆಜ್ಜೆಗುರುತು’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಾಹಿತ್ಯಕ್ಕೆ ಸಾವಿಲ್ಲ. ಕವಿ ದೊಡ್ಡವನೋ, ಕಾವ್ಯ ದೊಡ್ಡದೋ ಎಂದರೆ ಕಾವ್ಯ ಕವಿಗಿಂತ ದೊಡ್ಡದು. ನಾವು ಮನುಷ್ಯರು ನಿಗದಿತ ಅವಧಿಗೆ ಮಾತ್ರ ಬದುಕುವವರು ಎಂದು ಕಾವ್ಯ ಮತ್ತು ಸಾಹಿತ್ಯದ ಕುರಿತಂತೆ ವಿವರಿಸಿದರು.
ಹಳ್ಳಿಗರು ಓದದೇ ಅರ್ಥ ಮಾಡಿಕೊಂಡಿರುವ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ಜನರ ಜೀವನದ ಸಂಸ್ಕೃತಿಯ ನಾಡಿಯಾಗಿ ಕಾಣಿಸುತ್ತದೆ. ರಾಮಾಯಣ, ಮಹಾಭಾರತದಂತಹ ಕಥನಗಳನ್ನು ಜನರು ಓದದೇ ಅರ್ಥ ಮಾಡಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಇಂದು ಕಾವ್ಯಗಳನ್ನು ಓದಿದರೂ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವುದೇ ಇಲ್ಲ ಎಂದು ವಿವರಿಸಿದರು.
ವಾಲ್ಮೀಕಿಯಿಂದ ಶ್ರೀರಾಮ ಹಾಗೂ ವ್ಯಾಸರಿಂದ ಶ್ರೀಕೃಷ್ಣನ ಪರಿಚಯವಾಯಿತು. ಎಲ್ಲಿ ಹಾಡುಗಾರರು, ಗಮಕಿಗಳು ಇದ್ದಾರೋ ಅಲ್ಲಿ ಕಾವ್ಯಗಳು ಸಾವಿರಾರು ವರ್ಷ ರಾರಾಜಿಸುತ್ತವೆ ಎಂಬುದನ್ನು ಈಗಲೂ ಹಳ್ಳಿಗರು ಹೇಳುವ ಪುರಾಣಗಳು ತಿಳಿಸುತ್ತವೆ. ಡಾ.ಚಂದ್ರಶೇಖರ್ ಅವರು ವೈದ್ಯರಾದರೂ, ಸಮಾಜ, ಗೆಳೆಯರ ಬಗ್ಗೆ ಒಳ್ಳೆಯ ಮಾತುಗಳಿಂದ ಹೆಜ್ಜೆಗುರುತು ಕವನ ಸಂಗ್ರಹ ಪುಸ್ತಕದಲ್ಲಿ ಬರೆದಿದ್ದಾರೆ. ಮತ್ತೊಬ್ಬರಿಗೆ ಒಳ್ಳೆಯದಾಗಲಿ ಎನ್ನುವ ಗುಣವೇ ಕಡಿಮೆ. ಈ ಕವಿತೆಗಳು ಜನರ ಕಷ್ಟಗಳನ್ನು ಹೇಳಿವೆ. ಇವರ ಕೃತಿಗೆ ಮುನ್ನುಡಿ ಬರೆದಿರುವುದು ತಮಗೆ ಸಮಾಧಾನವಿದೆ ಎಂದು ಹೇಳಿದರು.
ಹೆಜ್ಜೆಗುರುತು ಕವನ ಸಂಕಲನದ ಕರ್ತೃ ಡಾ.ಚಂದ್ರಶೇಖರ್ ಮಾತನಾಡಿ, ಇದು ನನ್ನ ನಾಲ್ಕನೇ ಕೃತಿ. ಗುರುರಾಜ ಕರ್ಜಗಿ ಅವರೇ ಈ ಪುಸ್ತಕದ ಬಿಡುಗಡೆಗೆ ಅರ್ಹರೆಂದು ಭಾವಿಸಿದ್ದೇನೆ. ಓದುವುದು ರೋಮಾಂಚಕ ಎನಿಸಬೇಕಾದರೆ ಅಂತಹ ಕೃತಿಯನ್ನು ಸಾಹಿತಿಗಳು ಬರೆಯಬೇಕು. ಆಗ ಮಾತ್ರ ಓದು ಎಂಬುದು ರೋಮಾಂಚನ ಶಕ್ತಿ ಎನಿಸಿ ಬಿಡುತ್ತದೆ. ಮಾತಿನಲ್ಲಿ ಹುಟ್ಟಿದ್ದು ಗಧ್ಯವಾದರೆ, ಆತ್ಮದಲ್ಲಿ ಹುಟ್ಟಿದ್ದು ಪದ್ಯ ಎಂಬುದನ್ನು ನನ್ನ ಕವನದಲ್ಲಿ ಹೇಳಿದ್ದೇನೆ ಎಂದು ವಿವರಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ವೈದ್ಯರಾದ ಡಾ.ರಾಮಲಿಂಗೇಗೌಡ, ಡಾ.ವಿಜಯಾ, ಡಾ.ಬಿ.ಕೆ.ಸುರೇಶ್, ಎಂಎಸ್.ಅನಿತಾ ಇತರರಿದ್ದರು.