ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಕಾರೆಮೆಳೆ ದೇಗುಲ ಆವರಣದಲ್ಲಿ ಸ್ವಾಮಿ ವಿವೇಕಾನಂದ ಸ್ವಯಂ ಸೇವಾ ಪ್ರತಿಷ್ಠಾನ, ಪುನರಪಿ, ಸ್ಪಂದನಾ ಫೌಂಡೇಷನ್ ಸಹಯೋಗದಲ್ಲಿ ನೂರಾರು ಗಿಡಗಳನ್ನು ನೆಡಲಾಯಿತು. ಆರ್‌ಟಿಒ ಮಲ್ಲಿಕಾರ್ಜುನ, ವೆಂಕಟೇಶ್, ಜೇನುಗೂಡು ಮಹೇಶ್, ರಾಮಕೃಷ್ಣೇಗೌಡ, ಪರಮೇಶ್, ತಿಮ್ಮಶೆಟ್ಟಿ ಮತ್ತಿತರರಿದ್ದರು. 
ಮಂಡ್ಯ

ಹಸಿರು ಆಸ್ತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿ

ಕಿಕ್ಕೇರಿ: ಗಿಡಗಳನ್ನು ಎಲ್ಲೆಡೆ ನೆಡುವ ಜಾಗೃತಿ ಮೂಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾದರೂ, ಬಹುತೇಕ ಗಿಡಗಳು ಸಂರಕ್ಷಣೆ ಇಲ್ಲದೆ ಬಾಡುತ್ತಿವೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ಬೇಸರ ವ್ಯಕ್ತಪಡಿಸಿದರು.
ಹೋಬಳಿಯ ಗಡಿಗ್ರಾಮವಾದ ಊಗಿನಹಳ್ಳಿ ಗ್ರಾಮದ ಕಾರೆಮೆಳೆ ಸಿಂಗಮ್ಮ ದೇಗುಲದ ಆವರಣದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಸ್ವಯಂ ಸೇವಾ ಪ್ರತಿಷ್ಠಾನ, ಪುನರಪಿ ಹೆರಿಟೇಜ್ ರಿವೈವಲ್ ಫೌಂಡೇಷನ್, ಸ್ಪಂದನಾ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಯಲು ಪ್ರದೇಶದಲ್ಲಿ ಮರ, ಗಿಡಗಳನ್ನು ಬೆಳೆಸುವ ಆಲೋಚನೆ ಪ್ರಕೃತಿ ಸಂರಕ್ಷಣೆಗೆ ಸಹಕಾರಿಯಾಗಿದೆ. ನಮ್ಮ ಪೂರ್ವಜರು ಕೊಟ್ಟಿರುವ ಆಸ್ತಿ ಇದಾಗಿದ್ದು, ಹಸಿರು ಆಸ್ತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಇಲ್ಲಿ ನೆಡಲಾಗಿರುವ ನೂರಾರು ವಿವಿಧ ಜಾತಿಯ ಗಿಡಗಳ ಸಂರಕ್ಷಣೆಗಾಗಿ ಟ್ರಿ ಗಾರ್ಡ್(ಗಿಡಗಳ ರಕ್ಷಕ ಬೇಲಿ)ಗಳನ್ನು ತಮ್ಮ ಟ್ರಸ್ಟ್ ಮೂಲಕ ನೀಡಲಾಗುವುದು. ಇಲ್ಲಿರುವ ಎಲ್ಲ ಗಿಡಗಳನ್ನು ಉಳಿಸಿ, ಹೆಮ್ಮರವಾಗಿ ಬೆಳೆಸುವ ಜವಾಬ್ದಾರಿ ಈ ಸಂಸ್ಥೆ ಜತೆಗೆ ಗ್ರಾಮಸ್ಥರ ಪಾತ್ರ ಮುಖ್ಯವಿದೆ. ನಮ್ಮ ಉಸಿರಾಗಿರುವ ಗಿಡಗಳನ್ನು ಸಂರಕ್ಷಿಸಿ, ಜೀವ ಜಗತ್ತಿಗೆ ಉಸಿರಾಗಿಸುವ ಸಂಕಲ್ಪವನ್ನು ಗ್ರಾಮಸ್ಥರು ತೊಡಬೇಕು ಎಂದು ವಿನಂತಿಸಿದರು.
ಸಮಾಜ ಸೇವಕ ರಾಮಕೃಷ್ಣೇಗೌಡ ಮಾತನಾಡಿ, ಹವಾಮಾನ ವೈಪರಿತ್ಯ, ಹುಟ್ಟಿನಿಂದಲೇ ನಾನಾ ರೋಗ ಬಾರದಂತಿರಲು ಎಲ್ಲೆಡೆ ಮರಗಿಡ ನೆಡಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಜಾಣೇಗೌಡ ಮಾತನಾಡಿದರು. ಮಾವು, ಬೇವು, ಹೊಂಗೆ, ಆಲದಮರ, ಅರಳಿ, ನೇರಳೆ ಸೇರಿದಂತೆ ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು. ಪರಿಸರ ಪ್ರೇಮಿ ವೆಂಕಟೇಶ್, ಜೇನುಗೂಡು ಮಹೇಶ್, ಕೆ.ವಿ.ಬಲರಾಮು, ತಿಮ್ಮಶೆಟ್ಟಿ, ಗಾಣದಹಳ್ಳಿ ಸ್ವಾಮಿ, ಬಸವರಾಜು, ಪರಮೇಶ್, ಗಂಜಿಗೆರೆ ಮಹೇಶ್, ಪುನರಪಿ ಫೌಂಡೇಷನ್ ಎಚ್.ವಿ.ಸ್ವರಾಜ್, ವಕೀಲ ವೆಂಕಟೇಶ್, ಕಾವ್ಯಾ, ರವಿ, ದೀಕ್ಷಿತ್, ಪ್ರಕಾಶ್, ಗಗನಾ, ದಿವ್ಯಾ, ದೀಪಿಕಾ, ಸಂತೋಷ್, ಮಂಜುನಾಥ್, ಶರವಣ, ದೇವಿ ಇದ್ದರು.