ಮಂಡ್ಯ ನಗರದ ಮಿಮ್ಸ್‌ನಲ್ಲಿ ಸಾರ್ವಜನಿಕರಿಗೆ ಗಿಡಗಳನ್ನು ವಿತರಣೆ ಮಾಡಲಾಯಿತು.
ಮಂಡ್ಯ: ನಗರದ ಮಿಮ್ಸ್‌ನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಶನಿವಾರ ವಿಶ್ವ ಪರಿಸರ ದಿನದ ಅಂಗವಾಗಿ ಸಸ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಸರ್ಕಾರ ಅಥವಾ ಬೇರೆ ವ್ಯಕ್ತಿಗಳು ಪರಸರ ಸಂರಕ್ಷಣೆ ಮಾಡುತ್ತಾರೆ ಎಂದು ಜನಸಾಮಾನ್ಯರು ಕಾಯಬಾರದು. ಪ್ರತಿದಿನ ಪರಿಸರ ಸಂಸರಕ್ಷಣೆ ಆಗಬೇಕು. ಮಹಿಳೆಯರು ಮತ್ತು ಮಕ್ಕಳ ಹೆಸರಿನಲ್ಲಿ ಗಿಡ ನೆಟ್ಟು ಪೋಷಿಸಿದರೆ ಅವರಿಗೆ ವಿಶೇಷವಾದ ಬಹುಮಾನ ನೀಡಲಾಗುತ್ತದೆ ಎಂದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ರತ್ನಾಕರ ಮಾತನಾಡಿ, ಜಿಲ್ಲೆಯಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶವಿದೆ. ಜನಸಂಖ್ಯೆಗೆ ಅನುಗುಣವಾಗಿ ಹೇರಳವಾದ ಸಸ್ಯ ಸಂಪತ್ತು ಇರುವುದು ಅವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ತಾವುಗಳು ಹಸಿರು ಹೊದಿಸುವ ಕಾಯಕದಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನೂರಾರು ಹಣ್ಣಿನ ಗಿಡಗಳು ಮತ್ತು ಅರಣ್ಯಕ್ಕೆ ಪೂರಕವಾದ ಗಿಡಗಳನ್ನು ವಿತರಿಸಲಾಯಿತು.
ಪ್ರೌಢಶಾಲೆಯಲ್ಲಿ ಆಚರಣೆ: ನಗರದ ಶಂಕರಪುರ ಪ್ರೌಢಶಾಲೆಯಲ್ಲಿ ಸಸ್ಯೋತ್ಸವದ ಮೂಲಕ ಸಸಿ ನೆಡುವ ಕಾರ್ಯಕ್ರಮಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ವಾಸುದೇವ್ ಚಾಲನೆ ನೀಡಿದರು. ಬಳಿಕ ಮಾತನಾಡಿ, ವಿಶ್ವಸಂಸ್ಥೆ ಪ್ರತಿವರ್ಷ ಪರಿಸರ ದಿನವನ್ನು ಆಚರಿಸುತ್ತಿದೆ. ಇದು ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಉಂಟುಮಾಡಿ ಜಾಗೃತ ಮನಸ್ಸನ್ನು ಹೊಂದಲು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿ ಚಂದ್ರಶೇಖರ್, ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಮುಖ್ಯಶಿಕ್ಷಕ ಎಚ್.ಎಂ.ಶಿವಾನಂದ, ಉಪ ವಲಯ ಅರಣ್ಯಾಧಿಕಾರಿ ರತ್ನಾಕರ ಇತರರಿದ್ದರು. ಇದೇ ವೇಳೆ ಸಂತ ಜೋಸೆಫರ ಶಾಲೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ಅಧಿಕಾರಿ ವಾಸುದೇವ್ ಚಾಲನೆ ನೀಡಿ ಮಾತನಾಡಿದರು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.