ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಮಂಡ್ಯ: ಜಿಲ್ಲೆಯ ಪೆಟ್ರೋಲ್ ಬಂಕ್‌ಗಳಲ್ಲಿ ಕುಡಿಯುವ ನೀರು, ವಾಹನಕ್ಕೆ ಗಾಳಿ ತುಂಬುವುದು, ಶೌಚಗೃಹ ಸೇವೆ ಒದಗಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ನಗರದ ಡಿಸಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಈ ಸೇವೆ ದೊರಕುತ್ತಿಲ್ಲ. ಕೆಲವೆಡೆ ನಾಮಕೇ ವಾಸ್ತೆ ಈ ಸೇವೆ ಒದಗಿಸುವುದು ಕಂಡು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿ ಜಾರಿಗೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಬೇಕೆಂದು ಒತ್ತಾಯಿಸಿದರು.
ಪೆಟ್ರೋಲ್ ಬಂಕ್‌ಗಳಲ್ಲಿ ಕುಡಿಯುವ ನೀರು ಮತ್ತು ಶೌಚಗೃಹ ಒದಗಿಸುವುದು ಕಡ್ಡಾಯ. ನಿಯಮ ಉಲ್ಲಂಘಿಸಿದರೆ ಇಲಾಖೆಯಿಂದ ದಂಡ ಮತ್ತು ಪೆಟ್ರೋಲ್ ಪೂರೈಕೆ ಸ್ಥಗಿತಗೊಳಿಸುವ ಕಠಿಣ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪದೇ ಪದೇ ನಿಯಮ ಉಲ್ಲಂಘಿಸಿದರೆ ಬಂಕ್‌ನ ಪರವಾನಗಿಯನ್ನು 15 ರಿಂದ 45 ದಿನಗಳವರೆಗೆ ಅಥವಾ ಶಾಶ್ವತವಾಗಿ ರದ್ದುಪಡಿಸಬಹುದಾಗಿದೆ. ಸ್ವಚ್ಛ ಶೌಚಗೃಹ ನಿರ್ವಹಣೆ ನೆಪಮಾತ್ರಕ್ಕೆ ಇದ್ದರೆ ಸಾಲದು. ದಿನನಿತ್ಯ ಸ್ವಚ್ಛಗೊಳಿಸಬೇಕು. ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು. ನೀರಿನ ಸೌಲಭ್ಯ ಖಚಿತಪಡಿಸಬೇಕು. ಈ ಎಲ್ಲ ಅಂಶಗಳ ಕುರಿತು ಬಂಕ್ ಮಾಲೀಕರ ಸಭೆ ಕರೆದು ಜಾರಿಗೆ ಅಗತ್ಯ ಕ್ರಮ ವಹಿಸುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಶೀಘ್ರದಲ್ಲಿ ಬಂಕ್ ಮಾಲೀಕರ ಸಭೆ ಕರೆದು ಮಾರ್ಗಸೂಚಿ ಜಾರಿಗೆ ಆಹಾರ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಕರುನಾಡ ಸೇವಕರ ಸಂಘಟನೆ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ, ಎಸ್.ಕೆ. ರಾಜೂಗೌಡ, ರಾಮಣ್ಣ ಇದ್ದರು.