ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಮಾತನಾಡಿದರು. ಪರಶುರಾಮ್‌ಸತ್ತಿಗೇರಿ, ರಾಧಿಕಾ, ದೇವಾನಂದ್ ಇದ್ದರು. 
ಮಂಡ್ಯ

ಐದು ತಿಂಗಳೊಳಗೆ ಪೇಟೆಬೀದಿ ವಿಸ್ತರಣೆ ಆರಂಭ

ಲೋಕೇಶ್ ಮನು. ಡಿ
ಮದ್ದೂರು: ಐದು ತಿಂಗಳೊಳಗೆ ನಗರದ ಪೇಟೆಬೀದಿ ವಿಸ್ತರಣೆ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಕೆ.ಎಂ.ಉದಯ್ ಮಾಹಿತಿ ನೀಡಿದರು.
ತಾಲೂಕಿನ ಕದಲೂರು ಗ್ರಾಮದ ಶಾಸಕ ಕೆ.ಎಂ.ಉದಯ್ ಅವರ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದ ಪ್ರಮುಖ ಬೀದಿಯಾದ ಪೇಟೆ ಬೀದಿಯನ್ನು 100 ಅಡಿಗೆ ವಿಸ್ತರಣೆ ಮಾಡಲು ಈ ಹಿಂದೆ ಅನುಮೋದನೆ ಪಡೆಯಲಾಗಿತ್ತು. ಅದರಂತೆ ಸಂಬಂಧಪಟ್ಟ ಆಧಿಕಾರಿಗಳು ಡಿಪಿಆರ್ ಕೂಡ ಸಿದ್ಧಪಡಿಸಿದ್ದರು. ಆದರೆ ಇತ್ತೀಚೆಗೆ ಕಾರಣಾಂತರಗಳಿಂದ 80 ಅಡಿಗಳಿಗೆ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ತೀರ್ಮಾನವಾಗಿದೆ. ಈ ಹಿನ್ನೆಲೆಯಲ್ಲಿ ಪೇಟೆಬೀದಿಯನ್ನು 80 ಅಡಿಗಳಿಗೆ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸಿ ಇಷ್ಟರಲ್ಲೇ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಅದಕ್ಕಾಗಿಯೇ ಸೋಮವಾರ ತಹಸೀಲ್ದಾರ್, ಪೌರಾಡಳಿತ ಆಯುಕ್ತೆ, ಪಿಡಬ್ಲುೃಡಿ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ, ರಸ್ತೆಯ ವಿನ್ಯಾಸ ಸೇರಿದಂತೆ ಹಲವು ವಿಷಯದ ಬಗ್ಗೆ ಚರ್ಚಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ರಸ್ತೆ ವಿಸ್ತರಣೆಗೆ ಜಾಗವನ್ನು ಕಳೆದುಕೊಳ್ಳುವವವರಿಗೆ ಈಗಿರುವ ಮೌಲ್ಯಕ್ಕಿಂತ 2 ಪಟ್ಟು ಪರಿಹಾರ ಹಾಗೂ ಶಿಫ್ಟಿಂಗ್‌ಗಾಗಿ ಹೆಚ್ಚುವರಿಯಾಗಿ 5 ಲಕ್ಷ ರೂ. ಹಣ ನೀಡುವುದಾಗಿ ಭರವಸೆ ನೀಡಿದರು.
ರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರವಾಗಿ ಆರಂಭಿಸಬೇಕು ಎಂಬ ಉದ್ದೇಶದಿಂದ ವಿವಿಧ ಇಲಾಖೆಗಳ ಸುಮಾರು 20 ಅಧಿಕಾರಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಇನ್ನೂ ಐದು ತಿಂಗಳಲ್ಲಿ ಕಾನೂನಾತ್ಮಕವಾಗಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.
ತಾಲೂಕಿನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ರಾಜ್ಯ ಸರ್ಕಾರ ನೀರಾವರಿ ಯೋಜನೆಗೆ ಈಗಾಗಲೇ 700 ಕೋಟಿ ರೂ.ಗೂ ಅಧಿಕ ಅನುದಾನ ನೀಡಿದೆ. ನನೆಗುದಿಗೆ ಬಿದ್ದಿರುವ ಏತ ನೀರಾವರಿ ಪುನಶ್ಚೇತನ ಕಾಮಗಾರಿಗಳಿಗೂ ಶೀಘ್ರವಾಗಿ ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ ಎಂದರು.
ನಾಡಿನ ಹಿರಿಯ ಚೇತನ, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರು ಜನಾನುರಾಗಿ ನಿರಂತರವಾಗಿ ಕೆಲಸ ಮಾಡುವ ಮೂಲಕ ಜನರ ಮನಸ್ಸು ಗೆದ್ದಿದ್ದರು, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ನಗರಸಭೆ ಪೌರಾಯುಕ್ತೆ ರಾಧಿಕಾ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ದೇವಾನಂದ್, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.