ಮಂಡ್ಯ ನಗರದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಶಾಶ್ವತ ನಿವಾಸಿ ಪ್ರಮಾಣ ಪತ್ರ ಸಂಬಂಧ ಸಭೆ ಆಯೋಜಿಸಲಾಗಿತ್ತು. 
ಮಂಡ್ಯ

ಪಿಆರ್‌ಸಿ ನೀಡಲು ಏಕರೂಪದ ವ್ಯವಸ್ಥೆ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಶಾಶ್ವತ ನಿವಾಸಿ ಪ್ರಮಾಣ ಪತ್ರ(ಪಿಆರ್‌ಸಿ)ಗಳನ್ನು ನೀಡುವ ಉದ್ದೇಶದಿಂದ ಮಾರ್ಗಸೂಚಿ ಪ್ರಕಟ
  • ನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ
ಮಂಡ್ಯ: ಸರ್ಕಾರದ ಸೂಚನೆಯಂತೆ ಶಾಶ್ವತ ನಿವಾಸಿ ಪ್ರಮಾಣ ಪತ್ರ(ಪಿಆರ್‌ಸಿ)ಗಳನ್ನು ನೀಡುವ ಉದ್ದೇಶದಿಂದ ಇತ್ತೀಚಿಗೆ ಮಾರ್ಗಸೂಚಿಗಳನ್ನು ನೀಡಿ ಏಕರೂಪ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಶಾಶ್ವತ ನಿವಾಸಿ ಪ್ರಮಾಣ ಪತ್ರ ವಿಚಾರಕ್ಕೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಗರಿಕರು ಶಾಶ್ವತ ನಿವಾಸಿ ಪ್ರಮಾಣಪತ್ರಗಳನ್ನು ಪಡೆಯುವವರು ಅರ್ಜಿ ಸಲ್ಲಿಸಬೇಕು. ಅಂತಹ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡಲು ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅರ್ಜಿಯನ್ನು ಅಟಲ್ ಜೀ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ/ಗ್ರಾಮ ಒನ್ ಕೇಂದ್ರ/ಕರ್ನಾಟಕ ಒನ್ ಕೇಂದ್ರ/ಕಾಮನ್ ಸರ್ವೀಸ್ ಸೆಂಟರ್‌ಗಳಲ್ಲಿ ಸಲ್ಲಿಸಬಹುದು. ಅರ್ಜಿ ಸ್ವೀಕರಿಸಿದ ನಂತರ ಸಕ್ಷಮ ಪ್ರಾಧಿಕಾರದ ತಹಸೀಲ್ದಾರ್ ದಾಖಲೆ ಪರಿಶೀಲಿಸಿ, ಪಾರದರ್ಶಕವಾಗಿ ತುರ್ತಾಗಿ ಪ್ರಮಾಣಪತ್ರ ನೀಡಬೇಕು. ಶಾಶ್ವತ ನಿವಾಸಿ ಪ್ರಮಾಣಪತ್ರ ಪಡೆಯಲು ಅರ್ಹರಿರುವ ಅರ್ಜಿದಾರರು ರಾಜ್ಯದಲ್ಲಿ ಕನಿಷ್ಟ 10 ವರ್ಷ ಸಾಮಾನ್ಯ ನಿವಾಸಿಯಾಗಿರಬೇಕು. ಕರ್ನಾಟಕದಲ್ಲಿ ಜನಿಸಿರಬೇಕು. ಕನಿಷ್ಟ 10 ವರ್ಷ ಶಿಕ್ಷಣ ಪಡೆದಿರಬೇಕು. ಕನಿಷ್ಟ 10 ವರ್ಷದಿಂದ ಆಸ್ತಿ ಹೊಂದಿರಬೇಕು. ಕರ್ನಾಟಕ ಸರ್ಕಾರ ಅಥವಾ ಸಾರ್ವಜನಿಕ ಸಂಸ್ಥೆಯಲ್ಲಿ ಕನಿಷ್ಟ 7 ವರ್ಷ ಸೇವೆ ಸಲ್ಲಿಸಿರಬೇಕು. ಪಿಆರ್‌ಸಿ ಹೊಂದಿರುವ ಅಥವಾ ಪಡೆಯಲು ಅರ್ಹರಾಗಿರುವ ವ್ಯಕ್ತಿಯನ್ನು ವಿವಾಹವಾಗಿರಬೇಕು. ಪಾಲಕರು ಅಥವಾ ಪತಿ/ಪತ್ನಿ ಮೂಲಕ ಸರ್ಕಾರದ ನಿಯಮಾನುಸಾರ ಅರ್ಹತೆ ಹೊಂದಿರಬೇಕು ಎಂದು ವಿವರಿಸಿದರು.
ಶಾಶ್ವತ ನಿವಾಸಿ ಪ್ರಮಾಣಪತ್ರಗಳನ್ನು ಪಡೆಯಲು ಅರ್ಹರಿರುವ ಅರ್ಜಿದಾರರು, ಅನುಬಂಧ-1ರ ರೀತ್ಯಾ ಅಫಿಡವಿಟ್‌ಗೆ ಪೂರಕವಾಗಿ ಮುಂದಿನಂತೆ ಒಂದಕ್ಕಿಂತ ಹೆಚ್ಚಿನ ದಾಖಲೆ ಸಲ್ಲಿಸಬೇಕು. ಜನನ ಪ್ರಮಾಣ ಪತ್ರ, ಶಾಲಾ ಶೈಕ್ಷಣಿಕ ದಾಖಲೆ, 10 ವರ್ಷದ ನಿವಾಸದ ದಾಖಲೆ, ಆಸ್ತಿ ದಾಖಲೆ, ಮತದಾರರ ಪಟ್ಟಿ, ಆಧಾರ್, ಪಡಿತರ ಚೀಟಿ, ಸರ್ಕಾರಿ ಅಥವಾ ಸಾರ್ವಜನಿಕ ಸಂಸ್ಥೆಯ ಸೇವಾ ಪ್ರಮಾಣ ಪತ್ರ, ವಿವಾಹ ಪ್ರಮಾಣ ಪತ್ರ, ಸರ್ಕಾರ ಮಾನ್ಯಗೊಳಿಸಿರುವ ಇತರೆ ಪೂರಕ ದಾಖಲೆ ಸಲ್ಲಿಸಬೇಕು. ಏಕರೂಪ ವ್ಯವಸ್ಥೆಯಡಿ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ಸರ್ಕಾರದ ನಿಯಮಾವಳಿಗಳಿಗೆ ಯಾವುದೇ ಧಕ್ಕೆಯಾಗದಂತೆ ಪಾರದರ್ಶಕವಾಗಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ಟಿ.ಕೆ.ಹರೀಶ್ ಇತರರಿದ್ದರು.