ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿ ಗ್ರಾಮದಲ್ಲಿರುವ ಪಿರಿಯಪಟ್ಟದಮ್ಮನ ಗುಡಿ.
- ಕಿಕ್ಕೇರಿಯ ಗಂಗೇನಹಳ್ಳಿ ಗ್ರಾಮದಲ್ಲಿರುವ ಮಾತೆ
- ಶರಣಾದ ಭಕ್ತಿಗೆ ಸಕಲವೂ ಪ್ರಾಪ್ತಿ
ಕಿಕ್ಕೇರಿ : ನಂಬಿ ಬಂದ ಭಕ್ತರ ಕೈ ಬಿಡದೆ ಇಷ್ಟಾರ್ಥ ಕರುಣಿಸುವ ಶಕ್ತಿ ದೇವತೆಯಾಗಿ ಪಿರಿಯಾಪಟ್ಟಣದಮ್ಮ ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿ ಗ್ರಾಮದಲ್ಲಿ ನೆಲೆಸಿದ್ದಾಳೆ. ಈ ಆದಿಶಕ್ತಿಯನ್ನು ಮಸಣಿಕಮ್ಮ ಎಂದೂ ಕರೆಯಲಾಗುತ್ತೆ.
ಒಂದು ಸಮುದಾಯದ ಆರಾಧ ದೇವಿಯಾಗಿದ್ದ ಈ ಮಾತೆಗೆ ಈಗ ಇಡೀ ಗ್ರಾಮದ ಜನರು ಪೂಜಿಸುವುದು ದೇವಿಯ ಮಹಿಮೆಗೆ ಸಾಕ್ಷಿಯಾಗಿದೆ. ಕಂಕಣ ಭಾಗ್ಯ, ವೈವಾಹಿಕ ಸಮಸ್ಯೆ, ಸಂತಾನ ಪ್ರಾಪ್ತಿ, ವಿವಾದ, ವ್ಯಾಜ್ಯ, ಆರ್ಥಿಕ, ಶತ್ರುಕಾಟ ನಿವಾರಣೆ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಹೊತ್ತು ಬರುವ ಭಕ್ತರನ್ನು ಕಾಯುವ ದೇವಿಯಾಗಿದ್ದಾಳೆ.
ಇತಿಹಾಸ: ಈ ಹಿಂದೆ ಗ್ರಾಮದಲ್ಲಿ ಮಹಾಮಾರಿ ಆವರಿಸಿತ್ತು. ಬಡತನದ ಕಷ್ಟದೊಂದಿಗೆ ಅನಾರೋಗ್ಯ ಸಮಸ್ಯೆ ಕಾಡಿತ್ತು. ಇಡೀ ಊರಿಗೆ ಊರೇ ರೋಗ ಭೀತಿ, ಸಾವು, ನೋವಿನಿಂದ ಬಳಲಿತ್ತು. ದಿಕ್ಕು ತೋಚದೆ ಚಿಂತೆಗೀಡಾಗಿ ಪರಿತಪಿಸಿದ ವೇಳೆ ಗ್ರಾಮದ ಹಿರಿಯನಿಗೆ ದೇವಿ ಸ್ವಪ್ನದಲ್ಲಿ ಕಾಣಿಸಿಕೊಂಡು, ದೂರದ ಪಿರಿಯಾಪಟ್ಟಣದಲ್ಲಿ ನೆಲೆಸಿರುವ ನನ್ನನ್ನು ಬರಮಾಡಿಕೊಳ್ಳಿ. ಸೋದರಿ ಚಂದಗೋಳಮ್ಮ ಈ ಪ್ರಾಂತ್ಯದಲ್ಲಿ ಇದ್ದು, ನಾನೂ ನಿಮ್ಮೂರಿನ ಗ್ರಾಮ ರಕ್ಷಣೆಗಾಗಿ ನಿಲ್ಲುವೆ. ನನ್ನ ಭಂಟರು ನಿಮ್ಮ ಗ್ರಾಮವನ್ನು ಕಾಯಲು ಸಿದ್ಧರಿದ್ದಾರೆ. ಕಷ್ಟ ದೂರವಾಗುವ ಕಾಲಬಂದಿದೆ. ಭಯಬಿಡಿ, ಮಂಜಿನಂತೆ ಸಮಸ್ಯೆ ಕರಗಲಿದೆ ಎಂದು ನುಡಿದಿದ್ದಳು.
ದೇವಿಯ ಆಜ್ಞೆಯಂತೆ ಗ್ರಾಮದ ಹಿರಿಯರು ದೇವಿಯನ್ನು ಪೂಜಿಸಲು ತೀರ್ಮಾನಿಸಿ, ಗದ್ದುಗೆ ನಿರ್ಮಿಸಿ ಸಮೀಪದ ಗಂಗೇನಹಳ್ಳಿ ಕೆರೆಯಿಂದ ಗುಮಚಿ ಕಲ್ಲುಗಳನ್ನು ತಂದು ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಶುದ್ಧ ಗಂಗೋಧಕದೊಂದಿಗೆ ಸಂಪಕ್ಷೋಣೆ ಮಾಡಿ ಜೀವಕಳೆ ತುಂಬಲಾಯಿತು. ನಿತ್ಯ ಬೆಳಗ್ಗೆ, ಸಂಜೆ ತಪ್ಪದೆ ಪೂಜಿಸಿದ ಫಲವಾಗಿ ಗ್ರಾಮದ ಸಂಕಷ್ಟ ದೂರವಾಯಿತು ಎನ್ನುತ್ತಾರೆ ಹಿರಿಯರು.
ಮಾದಿಗ ಸಮುದಾಯದಿಂದ ಪೂಜೆ: ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟ ಗ್ರಾಮವಾದ ಗಂಗೇನಹಳ್ಳಿಯಲ್ಲಿ ಅನುಸೂಚಿತ ಸಮುದಾಯ(ಮಾದಿಗ) ಪ್ರಧಾನವಾಗಿದ್ದು, ಕುಲ, ಮನೆ ದೇವಿ ಈ ಆದಿಶಕ್ತಿ. ಪ್ರಸ್ತುತ ಇಡೀ ಗ್ರಾಮದ ದೇವಿಯಾಗಿ ಎಲ್ಲ ವರ್ಗದ ಜನರು ಆರಾಧಿಸುತ್ತಾರೆ. ಸಣ್ಣ ಸಮಸ್ಯೆ, ಜಾನುವಾರುಗಳಗೆ ತೊಂದರೆ ಕಾಡಿದರೆ ಮೊದಲು ದೇವಿಗೆ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಳ್ಳುತ್ತಾರೆ. ಪರಿಹಾರದ ನಂತರ ಹರಕೆ ಒಪ್ಪಿಸಿ ದೇವಿಗೆ ಭಕ್ತಿಯ ಜೈಕಾರ ಹಾಕುತ್ತಾರೆ. ಕಾಲನಂತರ ಗ್ರಾಮದಲ್ಲಿ ದೇವಿ ಪೂಜಾರಾಧನೆಗೆ ಗ್ರಾಮದ ಹೃದಯ ಭಾಗದಲ್ಲಿ ಗುಡಿ ನಿರ್ಮಿಸಲಾಗಿದೆ. ಕೃಷ್ಣ ಶಿಲೆಯಲ್ಲಿ ವಿಗ್ರಹ ಕೆತ್ತಿಸಿ ಪ್ರತಿಷ್ಠಾಪನೆ ಮಾಡಲಾಗಿದೆ. ಸಹಸ್ರ ಕುಂಭಾಭಿಷೇಕದೊಂದಿಗೆ ವಿವಿಧ ಹೋಮ ಹವನಾದಿ ನಡೆಸಿ ಸುಂದರ ಗುಡಿಯಲ್ಲಿ ದೇವಿ ನೆಲೆಸುವಂತೆ ಮಾಡಿದ್ದಾರೆ.
ದೇವಿಗೆ ಪ್ರಿಯವಾದ ನೈವೇದ್ಯವಾದ ಸಿಹಿ ಅಡುಗೆ ತಯಾರಿಸಿ ನಿತ್ಯ ಅರ್ಪಿಸುತ್ತಾರೆ. ಈ ಸಮುದಾಯದವರೇ ದೇವಿಯನ್ನು ಪೂಜಿಸುವುದು ವಾಡಿಕೆೆ. ಕೇವಲ ಚಮ್ಮಾರಿಕೆಗೆ ಮೀಸಲಾಗಿದ್ದ ಇಲ್ಲಿನ ಕಸುಬು ಕೃಷಿ, ಹೈನುಗಾರಿಕೆ, ತರಕಾರಿ, ಎಳನೀರು ಮತ್ತಿತರ ವ್ಯಾಪಾರ ಮಾಡುವಂತಾಗಿದೆ. ನಿರುದ್ಯೋಗ ದೂರವಾಗಿ ಉದ್ಯೋಗಿಗಳಾಗಿ ಸ್ವಾವಲಂಬಿಯಾಗಿ ಬದುಕಲು ದಾರಿದೀಪವಾಗಿದ್ದಾಳೆ ಪಿರಿಯಪಟ್ಟಣದಮ್ಮ.
ವಾರ್ಷಿಕ ಹಬ್ಬ: ಶಿವರಾತ್ರಿ ಕಳೆದ ಹದಿನೈದು ದಿನಗಳ ಬಳಿಕ ಗುರುವಾರ, ಶುಕ್ರವಾರ ಬರುವಂತೆ ದೇವಿಯ ಹಬ್ಬ ವಿಜೃಂಭಣೆಯಿಂದ ಜರುಗಲಿದೆ. ಎರಡು ದಿನಗಳಲ್ಲಿ ಮೊದಲ ದಿನ ಇಡೀ ರಾತ್ರಿ ದೇವಿಗೆ ವಿವಿಧ ಪೂಜೆಗಳ ಸಿದ್ಧತೆ ನಡೆಯಲಿದೆ. ಅರ್ಚಕ ಕಂಕಣ ಕಟ್ಟಿಕೊಂಡು ಗುಡಿಯ ಮುಂದೆ ಬಾಳೆಕಂದು ಕಡಿಯಲಾಗುತ್ತದೆ. ಮಹಿಳೆಯರು ದೇವಿಗೆ ನಿಂಬೆಹಣ್ಣಿನ ದೀಪಧಾರತಿ ಸಲ್ಲಿಸಲಾಗುತ್ತದೆ. ಕಿಕ್ಕೇರಿಯ ಅಮಾನಿಕೆರೆಗೆ ಮಂಗಳವಾದ್ಯ, ಕಹಳೆ ವಾದ್ಯದೊಂದಿಗೆ ತೆರಳುತ್ತಾರೆ. ಪವಿತ್ರ ಗಂಗೆಯನ್ನು ಕಳಸದಲ್ಲಿ ತುಂಬಿಕೊಂಡು ದೇವಿಗೆ ಅರ್ಪಿಸಲಾಗುತ್ತದೆ. ಕಳಸಕ್ಕೆ ಅರಿಷಿಣ, ಕುಂಕುಮ, ಪುಷ್ಪಮಾಲೆ, ಹೊಂಬಾಳೆಯೊಂದಿಗೆ ಶೃಂಗರಿಸಲಾಗುತ್ತದೆ. ಭಕ್ತರು ಜೈಕಾರ ಹಾಕುತ್ತ ಹೆಜ್ಜೆಗೊಂದು ಹಿಡುಗಾಯಿ ಅರ್ಪಿಸಿ ಆರತಿ ಬೆಳಗಲಾಗುತ್ತದೆ.
ಅಂತಿಮವಾಗಿ ದೇವಿ ಮೆರವಣಿಗೆ ಗ್ರಾಮಕ್ಕೆ ಪ್ರವೇಶಿಸಿದಾಗ ಕಳಸಗಳಿಗೆ ಅಗ್ರಪೂಜೆ ಸಲ್ಲಿಸಿ ಗುಡಿಯಲ್ಲಿ ಇಡಲಾಗುತ್ತದೆ. ದೇವಿಗೆ ಪಂಚಾಮೃತ, ಗಂಗಾಜಲಾಭಿಷೇಕ ನೆರವೇರಿಸಿ ಮಂಗಳದ್ರವ್ಯದೊಂದಿಗೆ ಪೂಜಿಸಲಾಗುತ್ತದೆ. ವಿವಿಧ ಪರಿಮಳ ಪುಷ್ಪ, ಆಭರಣ, ವಸ್ತ್ರಗಳಿಂದ ಪೂಜಿಸಲಾಗುತ್ತದೆ. ವಿವಿಧ ಹೋಮ ಹವನಾದಿಗಳು ನಡೆಯುತ್ತವೆ. ಕೊಂಡೋತ್ಸವದಲ್ಲಿ ಹರಕೆ ಹೊತ್ತ ಭಕ್ತರು ಸಾಗುತ್ತಾರೆ.
ಶುಕ್ರವಾರ ಗ್ರಾಮಸ್ಥರೊಂದಿಗೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ಗ್ರಾಮದ ಹೊರವಲಯದಲ್ಲಿರುವ ದೇವರ ಭಂಟರ ಗದ್ದುಗೆ ಬಳಿ ಜಮಾಯಿಸುತ್ತಾರೆ. ಶ್ರದ್ಧೆಯಿಂದ ದೇವಿಯ ಭಂಟರಿಗೆ ಮಾಂಸದ ಅಡುಗೆ ತಯಾರಿಸಿ ನೈವೇದ್ಯ ಅರ್ಪಿಸುತ್ತಾರೆ.
ಪಿರಿಯಪಟ್ಟಣದ ಅಮ್ಮನಿಗೆ ಮೊಸರನ್ನ, ಸಿಹಿಪೊಂಗಲ್, ಹಣ್ಣು ತುಪ್ಪದ ರಸಾಯನ ತಯಾರಿಸಿ ನೈವೇದ್ಯವಾಗಿ ನೀಡಲಾಗುತ್ತದೆ. ಬಂದ ನೆಂಟರಿಷ್ಟರಿಗೆ ದೇವಿ ಪ್ರಸಾದವಾಗಿ ಮಾಂಸದೂಟದ ಆತಿಥ್ಯ ನೀಡಲಾಗುತ್ತದೆ. ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಭಕ್ತರು ಹರಕೆಗಳನ್ನು ವಿವಿಧ ರೀತಿಯಲ್ಲಿ ತೀರಿಸಿ ಸಂಭ್ರಮಿಸುತ್ತಾರೆ.
ವಿಶೇಷ ಪೂಜೆ: ಮಂಗಳವಾರ, ಶುಕ್ರವಾರ, ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಪೂಜೆ ಇದೆ. ಗ್ರಾಮದ ದೈನಂದಿನ ಬದುಕು ದೇವಿ ಗುಡಿಗೆ ತೆರಳಿ ನಮಿಸಿದ ನಂತರವೇ ಸಾಗಲಿದೆ. ದೇವಿ ಅಪ್ಪಣೆಯಂತೆ ಗ್ರಾಮದ ಜನತೆ ನಡೆದುಕೊಳ್ಳುತ್ತಾರೆ. ಸಣ್ಣ ಸಮಸ್ಯೆ, ವಿವಾದಗಳಿಗೆ ಪರಿಹಾರದ ಕಟ್ಟೆಯಾಗಿ ಬಹುತೇಕ ನ್ಯಾಯಪಂಚಾಯಿತಿ ದೇವಿ ಗುಡಿ ಮೀಸಲಾಗಿದೆ.