ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಆಯೋಜಿಸಿದ್ದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧಪಟ್ಟ ಮತಗಟ್ಟೆ ಮಟ್ಟದ ಏಜೆಂಟ್‌ಗಳ ತರಬೇತಿ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಮಾತನಾಡಿದರು. 
ಮಂಡ್ಯ

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಗೆ ಜನರ ಸಹಕಾರ ಅಗತ್ಯ

ಪಾಂಡವಪುರ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕಾರ್ಯವು ಜೂ. 29ರಿಂದ ಜು. 30ರವರೆಗೆ ನಡೆಯಲಿದ್ದು, ರಾಜಕೀಯ ಪಕ್ಷಗಳ, ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಮನವಿ ಮಾಡಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಮಂಗಳವಾರ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯ ಆಯೋಜಿಸಿದ್ದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧಪಟ್ಟ ಮತಗಟ್ಟೆ ಮಟ್ಟದ ಏಜೆಂಟಟ್‌ಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ತರಬೇತಿ ಪಡೆದಿರುವ ಬೂತ್ ಮಟ್ಟದ ಅಧಿಕಾರಿಗಳು ಜೂ.29ರಿಂದ ಮತದಾರರ ಮನೆಮನೆಗಳಿಗೆ ತೆರಳಿ ಗಣತಿ ನಮೂನೆಯನ್ನು ಪ್ರತಿ ಮತದಾರರಿಗೆ ನೀಡಲಿದ್ದಾರೆ. ಮತದಾರರು ಆ ನಮೂನೆಯನ್ನು ಭರ್ತಿ ಮಾಡಬೇಕಿದೆ. ಈ ನಮೂನೆಯ ಜತೆಯಲ್ಲಿ 2002ರ ಮತಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿಯಾಗಿರುವುದನ್ನು ಒದಗಿಸಬೇಕಿದೆ. ಈ ಸಂಬಂಧ ಬೂತ್ ಮಟ್ಟದ ಅಧಿಕಾರಿಗಳು 2002ರಿಂದ 2020ರವರೆಗೆ ಶೇ.96ರಷ್ಟು ಮ್ಯಾಪಿಂಗ್ ಕಾರ್ಯ ಮಾಡಿದ್ದಾರೆ. 2002ರ ಮತಪಟ್ಟಿಯಲ್ಲಿ ಹೆಸರು ಇಲ್ಲದವರು ಚುನಾವಣಾ ಆಯೋಗ ಕೇಳಿರುವ 11 ದಾಖಲಾತಿಗಳಲ್ಲಿ ಕನಿಷ್ಠ 2 ದಾಖಲಾತಿಯನ್ನಾದರೂ ಒದಗಿಸಬೇಕು. ಹೀಗಾದರೆ ಮತದಾರರು ಮತಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಾರೆ ಎಂದು ಹೇಳಿದರು.
ಆ. 5ರಂದು ಪರಿಷ್ಕೃತ ಮತದಾರರ ಕರಡು ಮತಪಟ್ಟಿ ಬಿಡುಗಡೆ ಮಾಡಲಾಗುವುದು. ಸೆ.4ರೊಳಗೆ ಅಕ್ಷೇಪಣೆಗಳಿದ್ದರೆ ಸಲ್ಲಿಸಬಹುದಾಗಿದೆ. ಅ.7ರಂದು ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು. ಬೂತ್ ಮಟ್ಟದ ಅಧಿಕಾರಿಗಳಿಗೆ ಎಲ್ಲರೂ ಸಹಕರಿಸಬೇಕು. ಸಮುದಾಯದ ಸಹ ಭಾಗಿತ್ವವಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಹಾಗಾಗಿ ಮತಗಟ್ಟೆ ಮಟ್ಟದ ಎಲ್ಲ ಪಕ್ಷದ ಏಜೆಂಟ್‌ಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಮಾತನಾಡಿ, ಎಸ್‌ಐಆರ್‌ನಲ್ಲಿ ಅರ್ಹ ಮತದಾರರು ಹಾಗೂ ಅನರ್ಹ ಮತದಾರರ ಸಮಗ್ರ ಪರಿಷ್ಕರಣೆ ನಡೆಸಲಾಗುವುದು. ಪರಿಷ್ಕರಣೆಯಲ್ಲಿ ತಿದ್ದುಪಡಿ, ಸೇರ್ಪಡೆ ಹಾಗೂ ಕೈಬಿಡುವ ಕಾರ್ಯ ನಡೆಯಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಉಪ ತಹಸೀಲ್ದಾರ್ ಎ.ಎಸ್.ಮೋಹನ್ ಕುಮಾರ್, ಮತ ಪರಿಷ್ಕರಣೆಯ ಮಾಸ್ಟರ್ ಟ್ರೈನರ್‌ಗಳಾದ ರವಿ, ರಾಮಚಂದ್ರು ಇದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ರೈತ ಸಂಘ ಸೇರಿದಂತೆ ವಿವಿಧ ಪಕ್ಷಗಳ, ಸಂಘಟನೆಗಳ ಮುಖಂಡರು, ಕಾರ್ಯಕರ್ತರು ತರಬೇತಿಯಲ್ಲಿ ಭಾಗವಹಿಸಿದ್ದರು.