ಸರ್ಕಾರದ ಆದೇಶದಂತೆ ಎಂಆರ್‌ಎನ್ ಶುಗ್ರಸ್ ಸಂಸ್ಥೆ ಆಡಳಿತ ಮಂಡಳಿ ಪ್ರತಿ ಟನ್ ಕಬ್ಬಿಗೆ 50 ರೂ.ಪ್ರೋತ್ಸಾಹ ಧನ ಪಾವತಿಸಬೇಕು ಎಂದ ಆಗ್ರಹಿಸಿ ರೈತಸಂಘ ಕಾರ್ಯಕರ್ತರು ಪಿಎಸ್‌ಎಸ್‌ಕೆ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು.  
ಮಂಡ್ಯ

ಪ್ರತಿ ಟನ್ ಕಬ್ಬಿಗೆ 50 ರೂ.ಪ್ರೋತ್ಸಾಹ ಧನ ಪಾವತಿಸಿ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ರೈತಸಂಘದ ಕಾರ್ಯಕರ್ತರಿಂದ ಕಾರ್ಖಾನೆ ಮುಂದೆ ಪ್ರತಿಭಟನೆ
ಪಾಂಡವಪುರ: ಪಿಎಸ್‌ಎಸ್‌ಕೆ ಕಾರ್ಖಾನೆ ಗುತ್ತಿಗೆ ಪಡೆದಿರುವ ಎಂಆರ್‌ಎನ್ ಶುಗರ್ಸ್‌ ಆಡಳಿತ ಮಂಡಳಿ ಕಬ್ಬು ಸರಬರಾಜು ಮಾಡಿರುವ,ರೈತರಿಗೆ ಸರ್ಕಾರ ಆದೇಶದಂತೆ ಗಡುವಿನೊಳಗೆ ರೈತರ ಖಾತೆಗೆ ಪ್ರೋತ್ಸಾಹ ಧನ ಜಮಾವಣೆ ಮಾಡದಿದ್ದರೆ ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ ನಡೆಸಲು ಅವಕಾಶ ಮಾಡಿಕೊಡುವುದಿಲ್ಲ ಎಂಬ ಘೋಷಣೆಯೊಂದಿಗೆ ಶ್ರೀರಂಪಟ್ಟಣ ಮತ್ತು ಪಾಂಡವಪುರ ತಾಲೂಕು ರೈತಸಂಘಗಳ ಕಾರ್ಯಕರ್ತರು ಕಾರ್ಖಾನೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಪಿಎಸ್‌ಎಸ್‌ಕೆ ಕಾರ್ಖಾನೆ ಮುಂಭಾಗ ಜಮಾವಣೆಗೊಂಡ ರೈತಸಂಘ ಕಾರ್ಯಕರ್ತರು, ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಮುರುಗೇಶ್ ಆರ್. ನಿರಾಣಿ ಒಡೆತನದ ಎಂಆರ್‌ಎನ್ ಶುಗರ್ಸ್‌ ಸರ್ಕಾರದ ಆದೇಶದಂತೆ ರೈತರು ಸರಬರಾಜು ಮಾಡಿರುವ ಪ್ರತಿ ಟನ್ ಕಬ್ಬಿಗೆ 50 ರೂ. ಬೆಂಬಲ ಬೆಲೆ ನೀಡಬೇಕು. ಆದರೆ, ಸರ್ಕಾರದ ಆದೇಶದ ವಿರುದ್ಧ ಕಾರ್ಖಾನೆ ಮಾಲೀಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ರೈತರಿಗೆ ದ್ರೋಹ ಮಾಡುತ್ತಿದ್ದಾರೆ. ಎಂಆರ್‌ಎನ್ ಸಂಸ್ಥೆ ಕಳೆದ ಆರು ವರ್ಷಗಳಿಂದ ಪಾಂಡವಪುರ ಮತು ಶ್ರೀರಂಗಪಟ್ಟಣ ವ್ಯಾಪ್ತಿಯ ಕಬ್ಬು ಅರೆಯುವಿಕೆ ಕೆಲಸ ಮಾಡುತ್ತಿದೆ. ರೈತಸಂಘ ಇಷ್ಟು ವರ್ಷಗಳ ಕಾಲ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಂಘರ್ಷಕ್ಕೆ ಇಳಿದಿಲ್ಲ. ಆದರೆ, ಕಾರ್ಖಾನೆ ಮಾಲೀಕರು ಸರ್ಕಾರದ ಘೋಷಣೆಯಂತೆ ರೈತರಿಗೆ ಸಲ್ಲಬೇಕಾದ ಹಣ ಪಾವತಿಸುವಲ್ಲಿ ವಿಫಲರಾಗಿದ್ದಾರೆ. ರೈತರು 50 ರೂ.ಗಳಿಗಾಗಿ ಕಾರ್ಖಾನೆ ಮಾಲೀಕರ ಬಳಿ ಬಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಆರೋಪಿಸಿ ಕಾರ್ಖಾನೆ ಗುತ್ತಿಗೆದಾರರು ಮತ್ತು ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕಾರ್ಖಾನೆ ನಡೆಸುತ್ತಿರುವ ಎಂಆರ್‌ಎನ್ ಸಂಸ್ಥೆಯ ಮಾಲೀಕರು ಕೋಟ್ಯಾಂತರ ಆಸ್ತಿ ಮಾಲೀಕರಾಗಿದ್ದಾರೆ. ಆದರೆ ರೈತರಿಗೆ ಕೇವಲ 50 ರೂ. ಪ್ರೋತ್ಸಾಹ ಧನ ಪಾವತಿಸುವ ಮನಸ್ಸು ತೋರದೆ ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ರೈತರು ಕಬ್ಬು ಬೆಳೆಯದಿದ್ದರೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಆದಾಯ ಎಲ್ಲಿಂದ ಬರುತ್ತದೆ. ಚಿಲ್ಲರೆ ಹಣಕ್ಕೆ ತಡೆಯಾಜ್ಞೆ ತರುವ ಪರಿಸ್ಥಿತಿಗೆ ಕಾರ್ಖಾನೆ ಮಾಲೀಖರು ಹೋಗಿದ್ದಾರೆ. ಸರ್ಕಾರದ ಆದೇಶದಂತೆ ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆ ಮಾಲೀಕರು ಈಗಾಗಲೇ ರೈತರ ಖಾತೆಗೆ ಹಣ ಜಮಾವಣೆ ಮಾಡಿದ್ದಾರೆ. ದಕ್ಷಿಣ ಕರ್ನಾಟಕದ ಕೆಲವು ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರದ ಆದೇಶ ಪಾಲನೆ ಮಾಡದೆ ರೈತರಿಗೆ ವಂಚನೆ ಮಾಡತ್ತಿದ್ದಾರೆ ಎಂದು ಆರೋಪಿಸಿದರು.
ನ್ಯಾಯಾಲಯಗಳು ಕೂಡ ರೈತರ ವಿರುದ್ಧದ ಪ್ರಕರಣಗಳಲ್ಲಿ ಆಲೋಚಿಸಿ ತೀರ್ಪು ನೀಡಬೇಕು. ರೈತರು ಶ್ರಮಪಟ್ಟು ವ್ಯವಸಾಯ ಮಾಡಿ ಕಾರ್ಖಾನೆಗೆ ಸರಬರಜು ಮಾಡಿದ ಕಬ್ಬಿಗೆ ಸರ್ಕಾರದ ಆದೇಶದಂತೆ ಕಾರ್ಖಾನೆ ಮಾಲೀಕರು ಹಣ ಬಿಡುಗಡೆ ಮಾಡಬೇಕು. ಇದಕ್ಕೂ ನ್ಯಾಯಾಲಯ ತಡೆಯಾಜ್ಞೆ ನೀಡುವುದು ಸರಿಯಲ್ಲ. ದೇಶಕ್ಕೆ ಅನ್ನ ಹಾಕುವ ರೈತರ ವಿರುದ್ಧ ಈ ರೀತಿ ಯಾರೂ ನಡೆದುಕೊಳ್ಳಬಾರದು ಎಂದರು.
ಉಸ್ತುವಾರಿ ಕಮಿಟಿ ರಚನೆಯಾಗಬೇಕು : ಪಿಎಸ್‌ಎಸ್‌ಕೆ ಕಾರ್ಖಾನೆಗೆ ಸೇರಿದ ಸುಮಾರು 500 ಕೋಟಿಗೂ ಹೆಚ್ಚಿನ ಆಸ್ತಿ ಇದೆ. ಈ ಆಸ್ತಿ ರಕ್ಷಣೆ ಮಾಡಬೇಕಿರುವುದು ನಮ್ಮೆಲ್ಲರ ಜವಬ್ದಾರಿ ಹೀಗಾಗಿ ಎಲ್ಲಾ ಪಕ್ಷದ ರೈತರನ್ನು ಒಳಗೊಂಡಂತೆ ಸರ್ಕಾರ ಮೇಲುಸ್ತುವಾರಿ ಕಮಿಟಿ ರಚನೆ ಮಾಡಬೇಕು. ಇದಕ್ಕಾಗಿ ಮೇಲುಕೋಟೆ ಮತ್ತು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಹಾಗೂ ರಮೇಶ್ ಬಾಬು ಬಂಡಿ ಸಿದ್ದೇಗೌಡ ಪ್ರಯತ್ನ ಪಡಬೇಕು. ಇಬ್ಬರು ಶಾಸಕರಿಗೆ ಈ ಬಗ್ಗೆ ಕನಿಷ್ಠ ಜ್ಞಾನ ಇರಬೇಕು. ಸರ್ಕಾರ ರಚನೆಯಾಗಿ ಮೂರು ವರ್ಷವಾದರೂ ಕಮಿಟಿ ರಚನೆ ಮಾಡಲು ಸಾಧ್ಯವಾಗಿಲ್ಲ. ಹೀಗಾದರೆ ಪಿಎಸ್‌ಎಸ್‌ಕೆ ಆಸ್ತಿ ರಕ್ಷಣೆ ಯಾರ ಹೊಣೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ರೈತಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಮಾಜಿ ಅಧ್ಯಕ್ಷರಾದ ಕೆನ್ನಾಳು ನಾಗರಾಜು, ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಗೌಡೇಗೌಡ, ಎಸ್.ದಯಾನಂದ್, ಎಣ್ಣೆಹೊಳೆಕೊಪ್ಪಲು ವೈ.ಜಿ.ರಘು, ಮಹದೇವು, ಮುರುಳೀಧರ್ ಇತರರು ಇದ್ದರು.