ಕೆ.ಆರ್.ಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಸಂಘಟನಾ ಸೃಜನ ಅಭಿಯಾನ ಕಾರ್ಯಕ್ರಮದಲ್ಲಿ ಸೈಮನ್ ಅಲೆಕ್ಸ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ನಾಗೇಂದ್ರ ಕುಮಾರ್, ಸಿ.ಡಿ.ಗಂಗಾಧರ್, ಗೋಪಾಲಕೃಷ್ಣ, ಸಿದ್ದರಾಜು ಇತರರಿದ್ದರು. 
ಮಂಡ್ಯ

ನಿಷ್ಠಾವಂತ ಕಾರ್ಯಕರ್ತರಿಂದ ಪಕ್ಷ ಕಟ್ಟುವ ಕಾರ್ಯ

ಲಲಾಟಾಕ್ಷ ಎಸ್
ಕೆ.ಆರ್.ಪೇಟೆ: ಕಾರ್ಯಕರ್ತರೇ ನೇರವಾಗಿ ಜಿಲ್ಲೆ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರನ್ನು ಆಯ್ಕೆ ಮಾಡಿ ನಿಷ್ಠಾವಂತರ ಮೂಲಕ ಪಕ್ಷ ಕಟ್ಟುವ ಕೆಲಸ ಮಾಡುವಂತೆ ಎಐಸಿಸಿ ವೀಕ್ಷಕ ಸೈಮನ್ ಅಲೆಕ್ಸ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಸಂಘಟನಾ ಸೃಜನ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕರ್ತರು ನಾಯಕತ್ವದ ಶಕ್ತಿಯಾಗಬೇಕು. ನಾಯಕನಾದವನು ಪಕ್ಷ ತೊರೆದರೂ ಕಾರ್ಯಕರ್ತರು ಪಕ್ಷದಲ್ಲಿ ಉಳಿಯುತ್ತಾರೆ. ಪ್ರಸ್ತುತ ಕಾರ್ಯಕರ್ತರ ಮೂಲಕ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸುವ ಜವಾಬ್ದಾರಿಯನ್ನು ಪಕ್ಷ ನನಗೆ ವಹಿಸಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಯಾರಾಗಬೇಕು ಎನ್ನುವ ಅಭಿಪ್ರಾಯವನ್ನು ಕಾರ್ಯಕರ್ತರು ನೀಡಿ ಎಂದು ಹೇಳಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಕಾರ್ಯಕರ್ತರ ಅಭಿಪ್ರಾಯ ಪಡೆದು ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.
ಸಭೆಯಿಂದ ಎದ್ದು ಹೋದ ವೀಕ್ಷಕರು:
ಸಭೆಯಲ್ಲಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಡಿ.ಪ್ರೇಮಕುಮಾರ್, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 15 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಾಸಕರಿಲ್ಲ. ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಮುನ್ನಡೆಸುವ ನಾಯಕರೇ ಇಲ್ಲ. ಹತ್ತು ಹಲವು ನಾಯಕರಿದ್ದು ಒಬ್ಬರ ಬಳಿಗೆ ಹೋದರೆ ಮತ್ತೊಬ್ಬರಿಗೆ ಮುನಿಸು. ಹಾಗಾಗಿ ಮೊದಲು ಯಾರ ನಾಯಕತ್ವದಲ್ಲಿ ಇಲ್ಲಿನ ಕಾರ್ಯಕರ್ತರು ಮುನ್ನಡೆಯಬೇಕು ಎನ್ನುವುದನ್ನು ತಿಳಿಸಿ ಎಂದು ಪಟ್ಟು ಹಿಡಿದರು.
ಡಿ.ಪ್ರೇಮಕುಮಾರ್ ಅವರ ಮಾತಿಗೆ ಸಭೆಯಲ್ಲಿದ್ದ ಯುವ ಮುಖಂಡ ಸಾಯಿ ಸುಮಿತ್ ಸೇರಿದಂತೆ ಹಲವಾರು ಕಾರ್ಯಕರ್ತರು ದನಿಗೂಡಿಸಿದ್ದರಿಂದ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಭೆಯಲ್ಲಿ ಒಬ್ಬರ ಮಾತು ಮತ್ತೊಬ್ಬರಿಗೆ ಕೇಳದಂತೆ ಗದ್ದಲ ಏರ್ಪಟ್ಟಾಗ ಸಭೆಗೆ ಆಗಮಿಸಿದ್ದ ವೀಕ್ಷಕರು ತಮ್ಮ ಕೊಠಡಿಗೆ ಬಂದು ಅಭಿಪ್ರಾಯ ಹೇಳುವಂತೆ ಹೇಳಿ ಸಭೆಯಿಂದ ಹೊರನಡೆದರು.
ಪಕ್ಷದ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಿಸುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ. ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಭವಿಷ್ಯ ಇರುವುದರಿಂದ ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದು ಮನವಿ ಮಾಡಿದರು.
ಎ.ಐ.ಸಿ.ಸಿ ಪ್ರತಿನಿಧಿಗಳಾದ ಗೋಪಾಲಕೃಷ್ಣ, ಸಿದ್ದರಾಜು, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಮುಖಂಡ ಚಿದಂಬರ್, ಮುಖಂಡರಾದ ಬಿ.ಎಲ್.ದೇವರಾಜು, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಕುಮಾರ್, ಮಹಿಳಾ ಘಟಕದ ಆದಿಹಳ್ಳಿ ಮೀನಾಕ್ಷಿ ಭಾಗವಹಿಸಿದ್ದರು.