ಅಪಘಾತವಾಗಿದ್ದ ಸ್ಥಳ 
ಮಂಡ್ಯ

ಮಗನ ಅಂಗಾಗ ದಾನ ಮಾಡಿದ ಪಾಲಕರು

ಪ್ರಮುಖ ಮುಖ್ಯಾಂಶಗಳು

  • ಮಗನ ಸಾವಿನಲ್ಲೂ ಮಾನವೀಯತೆ ಮೆರೆದ ತಂದೆ, ತಾಯಿ
ಕೆ.ಆರ್. ಸಾಗರ: ಮೊಗರಹಳ್ಳಿ ಗ್ರಾಮದ ಬಳಿ ಎರಡು ಬೈಕ್‌ಗಳ ನಡುವೆ ಅಪಘಾತದಲ್ಲಿ ಗಾಯಗೊಂಡಿದ್ದ ಬೆಳಗೊಳ ಗ್ರಾಮದ ಯಶವಂತ್(19) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಗುರುವಾರ ರಾತ್ರಿ ಮಗನ ಅಂಗಾಂಗಳನ್ನು ದಾನ ಮಾಡುವ ಮೂಲಕ ಯಶವಂತ್ ತಂದೆ, ತಾಯಿ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
ಬೆಳಗೊಳ ಗ್ರಾಮದ ಶಂಕರ್ ಹಾಗೂ ರೇಖಾ ದಂಪತಿ ಕಿರಿಯ ಮಗ ಯಶವಂತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಈತ ಡಿ.15 ರಂದು ಬೆಳಗ್ಗೆ ಕೆಲಸಕ್ಕೆ ತನ್ನ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಮತ್ತೊಂದು ಸ್ಕೂಟರ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಮೈಸೂರು ನಗರದ ಖಾಸಗಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದ ಕಾರಣ ಮಿದುಳು ನಿಷ್ಕ್ರಿಯಗೊಂಡಿತ್ತು. ಈ ಬಗ್ಗೆ ಡಿಆರ್‌ಎಂ ಆಸ್ಪತ್ರೆ ವೈದ್ಯರು ಪಾಲಕರಿಗೆ ಮಾಹಿತಿ ನೀಡಿದ್ದರು. ನಂತರ ಮೈಸೂರು ಅಪೋಲೊ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಅಂಗಾಂಗ ದಾನದ ಬಗ್ಗೆ ಪಾಲಕರು ತಮ್ಮ ಆಶಯ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆೆಯಲ್ಲಿ ಯಶವಂತ್ ತಂದೆ-ತಾಯಿ ಕಣ್ಣು, ಹೃದಯ, ಕಿಡ್ನಿ, ಲಿವರ್ ಸೇರಿದಂತೆ ಇತರ ಅಂಗಾಂಗಗಳನ್ನು ಮೈಸೂರು ಅಪೊಲೋ ಆಸ್ಪತ್ರೆಯ ವೈದ್ಯರ ಸಹಾಯದಿಂದ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಘಟನೆ ಸಂಬಂಧ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.