ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅದೇಶ ವಿರೋಧಿಸಿ ರೈತಸಂಘ, ಕನ್ನಡಪರ ಸಂಘಟನೆ ಹಾಗೂ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು. 
ಮಂಡ್ಯ

ಪಾಂಡವಪುರ ಬಂದ್ ಭಾಗಶಃ ಯಶಸ್ವಿ

ಪಾಂಡವಪುರ:

ಸಿಡಬ್ಲುೃಆರ್‌ಸಿ ಶಿಫಾರಸಿನ ಮೇರೆಗೆ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್‌ನಂತೆ 15 ದಿನಗಳ ಕಾಲ ನೀರು ಹರಿಸುವಂತೆ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಖಂಡಿಸಿ ಕರೆ ನೀಡಲಾಗಿದ್ದ ಪಾಂಡವಪುರ ಬಂದ್ ಭಾಗಶಃ ಯಶಸ್ವಿಯಾಯಿತು.

ಬೆಳಗ್ಗೆ 9ರವರೆಗೆ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಬಳಿಕ ರೈತಸಂಘ ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಎಲ್ಲರೂ ಪಕ್ಷಾತೀತವಾಗಿ ಹಾಗೂ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಬಂದ್ ಮಾಡಿ ಬೆಂಬಲ ನೀಡಿದರು.
ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಎಂದಿನಂತಿತ್ತು, ಹಾಲಿನ ವ್ಯಾಪಾರ, ಔಷಧ ಅಂಗಡಿಗಳು ತೆರೆದಿದ್ದವು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಹೋಟೆಲ್, ದಿನಸಿ ಅಂಗಡಿ, ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಇತರ ಎಲ್ಲ ಅಂಗಡಿ-ಮುಂಗಟ್ಟುಗಳ ಮಾಲೀಕರು ಅಂಗಡಿ ಬಂದ್ ಮಾಡಿ ಬಂದ್‌ಗೆ ಸಹಕರಿಸಿದರು.
ಪಟ್ಟಣದ ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಗುಳಿದು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದರು.
ರೈತಸಂಘದ ಮುಖಂಡರ ನೇತೃತ್ವದಲ್ಲಿ ಪಟ್ಟಣದ ಐದು ದೀಪ ವೃತ್ತದ ಬಳಿ ಜಮಾವಣೆಗೊಂಡ ವಿದ್ಯಾರ್ಥಿಗಳು ಸುಮಾರು ಅರ್ಧ ತಾಸು ಶ್ರೀರಂಗಪಟ್ಟಣದ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಬಹಳ ಹಿಂದಿನಿಂದಲೂ ಅನ್ಯಾಯವಾಗುತ್ತಲೇ ಇದೆ. ಇದನ್ನು ಪ್ರಶ್ನೆ ಮಾಡುವ ದಿಟ್ಟ ರಾಜಕಾರಣಿ ನಮ್ಮಲ್ಲಿ ಇಲ್ಲವಾಗಿದ್ದಾರೆ. ನೀರು ಸಂಗ್ರಹವಿದ್ದಾಗ ಎರಡು ರಾಜ್ಯಗಳು ಎಷ್ಟು ಪ್ರಮಾಣದ ನೀರು ಹಂಚಿಕೆ ಮಾಡಿಕೊಳ್ಳಬೇಕು ಎಂಬುದನ್ನು ತಜ್ಞರು ನಿರ್ಧರಿಸಿದ್ದಾರೆ. ಮಳೆ ಇಲ್ಲದೆ ಜಲಾಶಯಗಳಲ್ಲಿ ನೀರಿನ ಸಂಗ್ರವಿಲ್ಲದಿದ್ದಾಗ ಏನೂ ಮಾಡಬೇಕು ಎಂದು ತಿಳಿಸಿಲ್ಲ. ಈ ವಿಚಾರ ಚರ್ಚೆಯಾದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.
ರೈತಸಂಘದ ತಾಲೂಕು ಅಧ್ಯಕ್ಷ ವೈ.ಪಿ.ಮಂಜು ಮಾತನಾಡಿದರು.
ಪ್ರತಿಭಟನೆಯಲ್ಲಿ ತಾಲೂಕು ರೈತಸಂಘ ಕಾರ್ಯದರ್ಶಿಗಳಾದ ವೈ.ಜಿ.ರಘು, ಡಾಮಡಹಳ್ಳಿ ಅಶೋಕ, ಶರತ್, ಬೇವಿನಕುಪ್ಪೆ ಅನಿಲ್, ನಾಗರಾಜು, ಬಿಜೆಪಿ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್, ಹೊಸಕೋಟೆ ಸುರೇಶ್ ಇತರರು ಇದ್ದರು.