ಪಾಂಡವಪುರ ತಾಲೂಕು ಅರಳಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಹವಾಮಾನ ಬದಲಾವಣೆ ಕುರಿತ ಕಾರ್ಯಾಗಾರವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಎ.ಎಲ್.ಕೆಂಪೂಗೌಡ, ಕೆ.ಎನ್.ವಿಜಯಕುಮಾರ್ ಇದ್ದರು.
ಪಾಂಡವಪುರ: ಹವಾಮಾನ ಬದಲಾವಣೆಯಿಂದಾಗಿ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಸದನದಲ್ಲಿ ಖಾಸಗಿ ಮಸೂದೆ ಮಂಡಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಅರಳಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪುಟ್ಟಣ್ಣಯ್ಯ ಫೌಂಡೇಷನ್ ಹಾಗೂ ಆನೋಡ್ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹವಾಮಾನ ಬದಲಾವಣೆ ಮತ್ತು ಪರಿಣಾಮಗಳನ್ನು ತಡೆಗಟ್ಟುವಲ್ಲಿ ಗ್ರಾಮ ಪಂಚಾಯಿತಿ ಪಾತ್ರ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದಿಂದ ಪಂಚಾಯಿತಿ ಮಟ್ಟದಲ್ಲಿ ಹವಾಮಾನ ಬದಲಾವಣೆ ಕುರಿತಂತೆ ಯಾವ್ಯಾವ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂಬುದರ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕಿದೆ. ಈ ವಿಚಾರವಾಗಿ ಖಾಸಗಿ ಮಸೂದೆ ಮಂಡನೆಯಲ್ಲಿ ಚರ್ಚಿಸಲಾಗುವುದು. ಮಸೂದೆ ಅಂಗೀಕಾರವಾದರೆ ರಾಜ್ಯದ ಎಲ್ಲ ಭಾಗಗಳಲ್ಲಿ ಒಂದೇ ರೀತಿ ಕ್ರಮಗಳನ್ನು ಅನುಸರಿಸಬಹುದಾಗಿದೆ ಎಂದು ತಿಳಿಸಿದರು.
ಹವಾಮಾನ ಬದಲಾವಣೆಯಿಂದ ಗ್ರಾಮೀಣ ಭಾಗದ ಜನರು ಮತ್ತು ಕೃಷಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟಲು ಪಂಚಾಯಿತಿ ಮಟ್ಟದಲ್ಲಿ ಯಾವ ರೀತಿ ಕೆಲಸ ಮಾಡಬಹುದು ಎಂಬುದರ ಬಗ್ಗೆ ಆನೋಡ್ ಸಂಸ್ಥೆ ತಾಲೂಕಿನ 14 ಗ್ರಾಪಂಗಳಲ್ಲಿ ಕಾರ್ಯಾಗಾರ ನಡೆಸುತ್ತಿದೆ. ಸ್ಥಳೀಯ ಪಂಚಾಯಿತಿಗಳಲ್ಲಿ ಆಡಳಿತ ಸುಧಾರಣೆ ಯಾವ ರೀತಿ ಮಾಡಬೇಕು ಎಂಬುದನ್ನು ಸಂಸ್ಥೆ ತಿಳಿಸಿಕೊಡಲಿದೆ ಎಂದರು.
ಉತ್ತರ ಕರ್ನಾಟಕದ ಕೆಲವೆಡೆ ಬಿಸಿಲಿನ ತಾಪಮಾನಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೂಲಿ ಕಾರ್ಮಿಕರು ಹಾಗೂ ಸರ್ಕಾರಿ ಕಚೇರಿ ನೌಕರರು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಕೆಲಸ ಮಾಡಬಾರದು ಎಂಬ ನಿರ್ಧಾರ ಮಾಡಲಾಗಿದೆ. ಹವಾಮಾನ ಬದಲಾವಣೆಯೊಂದಿಗೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ ಹವಾಮಾನ ವೈಪರೀತ್ಯ ತಡೆಗಟ್ಟಲು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಕೆ.ರವಿಕುಮಾರ್, ಸದಸ್ಯೆ ರೂಪಾ, ಪಿಡಿಒ ರಘು, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆ.ಎನ್.ವಿಜಯಕುಮಾರ್, ಪುಟ್ಟಣ್ಣಯ್ಯ ಫೌಂಡೇಷನ್ ಕಾರ್ಯನಿರ್ವಾಹಕ ನಿರ್ದೇಶಕ ರಣಜಿತ್, ತಾಪಂ ಇಒ ವೀಣಾ, ಮುಖ್ಯ ಶಿಕ್ಷಕ ಚಲುವೇಗೌಡ, ಆನೋಡ್ ಸಂಸ್ಥೆಯ ಹುಣಸೂರು ರಾಜಾ, ಪ್ರದೀಪ್, ಲಿಂಗದೇವರು, ಸೋನಾಲಿ ಶ್ರೀವಾಸ್ತವ, ಸುದೀಪ್ ಇದ್ದರು.
ಪಾಂಡವಪುರ ತಾಲೂಕು ಅರಳಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಹವಾಮಾನ ಬದಲಾವಣೆ ಕುರಿತ ಕಾರ್ಯಾಗಾರವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಎ.ಎಲ್.ಕೆಂಪೂಗೌಡ, ಕೆ.ಎನ್.ವಿಜಯಕುಮಾರ್ ಇದ್ದರು.