ಪಾಂಡವಪುರ ತಾಲೂಕು ವೀರಶೈವ ಮಹಾಸಭಾದ ವತಿಯಿಂದ ಬುಧವಾರ ಸಿದ್ದಗಂಗಾ ಶ್ರೀ ಡಾ.ಶಿವಕುಮಾರ ಸ್ವಾಮೀಜಿ 7ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು. ತಾಳಶಾಸನ ಆನಂದ್, ಕಾಳೇನಹಳ್ಳಿ ಶಿವಕುಮಾರ್ ಇತರರು ಇದ್ದರು.
ಪಾಂಡವಪುರ : ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಬುಧವಾರ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಪಟ್ಟಣದ ಐದು ದೀಪವೃತ್ತದಲ್ಲಿ ಸಭಾದ ಜಿಲ್ಲಾಧ್ಯಕ್ಷ ತಾಳಶಾಸನ ಎಸ್.ಆನಂದ್ ಹಾಗೂ ತಾಲೂಕು ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗುರುಗಳ ಸ್ಮರಣೆ ಮಾಡಲಾಯಿತು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಈ ಸಂದರ್ಭ ಮಾತನಾಡಿ, ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳು ನಾಡಿನಲ್ಲಿ ವಿದ್ಯಾದಾನ, ಅನ್ನದಾನಕ್ಕೆ ಮಹತ್ವ ನೀಡಿದವರು ಎಂದರು. ಮಹಾನ್ ಗುರುಗಳ ಆದರ್ಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ನಡೆದ ದಾರಿಯಲ್ಲಿ ಸಾಗಬೇಕು ಎಂದರು. ಸಭಾದ ಜಿಲ್ಲಾಧ್ಯಕ್ಷ ಎಸ್.ಆನಂದ್ ಮಾತನಾಡಿ, ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಜನರ ಬದುಕಿಗೆ
ಶ್ರೀಗಳು ಆಸರೆಯಾಗಿದ್ದರು. ಮಠದಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ದೊಡ್ಡದೊಡ್ಡ ಹುದ್ದೆಗಳನ್ನು ಅಲಂಕರಿಸುವ ಮೂಲಕ ಬದುಕು ರೂಪಿಸಿಕೊಂಡಿದ್ದಾರೆ ಎಂದು ಸ್ಮರಿಸಿದರು.
ಶ್ರೀ ಮಠವು ಎಲ್ಲ ಸಮಾಜದ ಮಕ್ಕಳಿಗೆ ಅಕ್ಷರ, ಅನ್ನ ದಾಸೋಹ ನೀಡುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯಾಗಿದೆ. ಹೀಗಾಗಿ, ನಾವೆಲ್ಲರೂ ಶ್ರೀಗಳು ತೋರಿದ ಮಾರ್ಗದಲ್ಲಿ ನಡೆಯಬೇಕಿದೆ ಎಂದರು.
ಮುಖಂಡ ಎಸ್.ಎ.ಮಲ್ಲೇಶ್ ಮಾತನಾಡಿ, ಶ್ರೀಗಳು ಮಾಡಿದ ಅಕ್ಷರ, ಅನ್ನದಾಸೋಹ ಜಗತ್ತಿಗೇ ಮಾದರಿಯಾದ ಸೇವೆ ಎಂದರು. ಇದೇವೇಳೆ ಸಾರ್ವಜನಿಕರು ಮತ್ತು ಭಕ್ತರಿಗೆ ಅನ್ನದಾಸೋಹ ನೆರವೇರಿಸಲಾಯಿತು. ಮಹಾಸಭಾ ತಾಲೂಕು ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಜಯಣ್ಣ, ಮುಖಂಡರಾದ ಚಂದ್ರಶೇಖರಯ್ಯ, ಕಲಿ ಗಣೇಶ್, ಸುರೇಶ್, ಮೀನಾಕ್ಷಿ, ಮಹದೇವಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಆದರ್ಶ, ಅಲ್ಪಳ್ಳಿ ಗೋವಿಂದಯ್ಯ, ಟೌನ್‌ಚಂದ್ರು, ಧನ್ಯಕುಮಾರ್, ಚಂದ್ರಶೇಖರಯ್ಯ ಇತರರು ಇದ್ದರು.