ಕಿಕ್ಕೇರಿ ಸಮೀಪದ ಬೆಡದಹಳ್ಳಿಯ ಪಂಚಭೂತೇಶ್ವರ ಮಠದಲ್ಲಿ ಇತ್ತೀಚೆಗೆ ನಡೆದ ಪಂಚಗವ್ಯ ಚಿಕಿತ್ಸಾ ಶಿಬಿರದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಪುನೀತ್, ಪ್ರವೀಣ್ ಸರಳಾಯ, ಕಾಂತರಾಜು ಇದ್ದರು.
ಕಿಕ್ಕೇರಿ: ದೇಸಿ ಗೋವುಗಳ ಉತ್ಪನ್ನಗಳಿಂದ ಸರ್ವರೋಗಕ್ಕೂ ಪರಿಹಾರವಿದೆ. ಇದನ್ನು ಅರಿತು ಗೋವುಗಳ ಸಂರಕ್ಷಣೆಗೆ ಮುಂದಾಗಿ ಎಂದು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.
ಸಮೀಪದ ಬೆಡದಹಳ್ಳಿ ಪಂಚಭೂತೇಶ್ವರ ಮಠದಲ್ಲಿ ಇತ್ತೀಚೆಗೆ ಸಂಪದ ಫೌಂಡೇಷನ್, ಪ್ರಗತಿ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ಪಂಚಗವ್ಯ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ಗೋಮಯ ಪವಿತ್ರ ಗಂಗಾಜಲದಂತೆ ಕೆಲಸ ಮಾಡಲಿದೆ. ದೇಸಿ ಹಸುವಿನ ತುಪ್ಪ ಅಮೃತಕ್ಕೆ ಸಮಾನ ಎಂಬುದನ್ನು ಪೂರ್ವಜರು ಕಂಡು ಕೊಂಡಿದ್ದರು. ಗೋವಿನ ಮೈದಡವಿದರೆ ಹಲವು ರೋಗಗಳಿಗೆ ಪರಿಹಾರ ಸಿಗಲಿದೆ ಎಂದರು.
ಆರೋಗ್ಯಕರ ಆಹಾರವನ್ನು ರೈತರು ಗೋವಿನ ಸಗಣಿಯ ಗೊಬ್ಬರದಿಂದ ಬೆಳೆದ ಫಲವಾಗಿ ರೋಗಮುಕ್ತರಾಗಿ ದೀರ್ಘಾಯುಸ್ಸಿಗಳಾಗಿ ಬದುಕುತ್ತಿದ್ದರು. ಇಂತಹ ಅದ್ಭುತ ದೇಸಿ ಗೋವು, ಗೋವಿನ ತಳಿಯನ್ನು ಉಳಿಸಲು ಇಂದಿನ ಪೀಳಿಗೆ ಮುಂದಾಗಬೇಕು ಎಂದು ಹೇಳಿದರು.
ಪಂಚಭೂತೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಪಂಚಗವ್ಯ ಉತ್ಪನ್ನಗಳು ಯಾವುದೇ ದುಷ್ಪರಿಣಾಮ ಬೀರದೆ ನಿಧಾನವಾಗಿ ದೇಹದ ಸಮಸ್ಯೆಗಳನ್ನು ಪರಿಹರಿಸಲಿವೆ. ಇದನ್ನರಿತು ಋಷಿಮುನಿಗಳು ಗೋವುಗಳನ್ನು ಕಾಮಧೇನು ಎಂದು ಕರೆಯುತ್ತಿದ್ದರು. ದೇಶಿ ಗೋವುಗಳನ್ನು ಸಾಕಿ ಇದರ ಉತ್ಪನ್ನಗಳನ್ನು ತಯಾರಿಸಲು ಯುವಕರು, ರೈತರು ಮುಂದಾಗಲು ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಹೆಚ್ಚು ಹಾಲು, ಲಾಭ ಸಿಗಲಿದೆ ಎಂದು ಮಿಶ್ರತಳಿ ಗೋವುಗಳಿಗೆ ಮುಗಿಬೀಳದಿರಿ. ನಮ್ಮ ದೇಸಿ ತಳಿ, ನಮ್ಮ ಸಂಸ್ಕೃತಿ ಉಳಿಸಲು ದೇಸಿ ಗೋವುಗಳನ್ನು ಸಾಕಿ ಎಂದು ನುಡಿದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಪದ ಫೌಂಡೇಷನ್ ಅಧ್ಯಕ್ಷ ಪುನೀತ್, ಗೋ ಸೇವಾ ಪ್ರತಿನಿಧಿ ಪ್ರವೀಣ್ ಸರಳಾಯ, ಪ್ರಗತಿ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್, ಪಂಚಭೂತೇಶ್ವರ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಕಾಂತರಾಜು, ಭಾರತೀಪುರ ಪುಟ್ಟಣ್ಣ, ಸಾಗರ್, ಪ್ರವೀಣ್, ಕೃಷ್ಣೇಗೌಡ, ಬಳ್ಳೇಕೆರೆ ಮಂಜುನಾಥ್, ನಾಗೇಂದ್ರ, ಹೊನ್ನೇಗೌಡ, ಕುಮಾರ್, ರವೀಗೌಡ, ಶ್ರೀನಿವಾಸ್, ಮಾದೇಗೌಡ, ವೆಂಕಟೇಶ್, ಸಂತೋಷ್ ಮತ್ತಿತರರಿದ್ದರು.