ಮಂಡ್ಯ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.  
ಮಂಡ್ಯ

ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸೋಣ: ಎಡಿಸಿ ಬಿ.ಸಿ. ಶಿವಾನಂದಮೂರ್ತಿ ಕರೆ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಚಿತ್ರಕಲಾ ಸ್ಪರ್ಧೆ
  • ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆಯೋಜನೆ
ಮಂಡ್ಯ: ಚಿತ್ರಕಲೆ ಚಟುವಟಿಕೆ ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸಲು ಸಹಕಾರಿಯಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಮಂಡ್ಯ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಮಂಗಲ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಚಿತ್ರಕಲಾ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಚಿತ್ರಕಲಾ ಸ್ಪರ್ಧೆ ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುತ್ತದೆ. ಆ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಚಿತ್ರಕಲೆ ಮೂಲಕ ಹೊರ ತರುವುದರ ಮೂಲಕ ಪರಿಸರ ವಿಚಾರವೂ ಮುಖ್ಯ ಎನಿಸುತ್ತದೆ. ಒಂದು ಗ್ರಾಮದಲ್ಲಿ 500 ಜನಸಂಖ್ಯೆ ಇದ್ದರೆ, ಅದರಲ್ಲಿ ಕನಿಷ್ಟ 200 ಜನರಾದರು ಪರಿಸರದ ಬಗ್ಗೆ ಕಾಳಜಿ ವಹಿಸಲು ಮುಂದಾಗಬೇಕು. ಆಗ ಖಂಡಿತವಾಗಿ ಪರಿಸರ ರಕ್ಷಣೆ ಮಾಡಬಹುದು. ಪರಿಣಾಮ ಮಾಲಿನ್ಯ ಮುಕ್ತ ಪರಿಸರ ಆಗುತ್ತದೆ. ಆ ಮೂಲಕ ಸ್ವಚ್ಛ ಗಾಳಿ, ನೀರು, ಆಹಾರ ಸಿಗಲು ಅವಕಾಶವಾಗುತ್ತದೆ. ಆ ನಿಟ್ಟಿನಲ್ಲಿ ಪರಿಸರವನ್ನು ಮಾಲಿನ್ಯ ಮಾಡುವುದನ್ನು ನಿಯಂತ್ರಣ ಮಾಡಲು ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡೋಣ ಎಂದು ಹೇಳಿದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ವಿಶ್ವಸಂಸ್ಥೆಯ 85 ಅಂಗ ರಾಷ್ಟ್ರಗಳೆಲ್ಲ ಸೇರಿ ಜೂ.5ರಂದು ವಿಶ್ವ ಪರಿಸರ ದಿನ ಆಚರಿಸುತ್ತಿವೆ. ಬೆಳೆಯುವ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಉಂಟು ಮಾಡಬೇಕು ಎಂದು ಕಳೆದ 18 ವರ್ಷದಿಂದ ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತೇಜನ ಕೊಡಲು ವಿದ್ಯಾರ್ಥಿಗಳ ಮೂಲಕ ಅರಣ್ಯ ಸಾಕ್ಷರತೆ ಉಂಟುಮಾಡಲು ಹಣ್ಣಿನ ಗಿಡಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು ಮಾತನಾಡಿ, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಉಂಟು ಮಾಡಿ ಮಕ್ಕಳ ಮೂಲಕ ತಲೆಮಾರಿಗೆ ಪ್ರಕೃತಿ ಸಂರಕ್ಷಣೆ ಮಾಡುವ ಕಾಯಕವನ್ನು ಮಾಡುವುದು ಅವಶ್ಯಕವಾಗಿದೆ. ಪ್ರಕೃತಿ ಸೇವೆಯನ್ನು ನಿಸ್ವಾರ್ಥವಾಗಿ ಮಾಡಬೇಕಿದೆ. ಮಕ್ಕಳಿಂದ ಎಲ್ಲ ವಯೋಮಾನದವರು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅವಶ್ಯ ಎಂದರು.

ಚಿತ್ರಕಲಾ ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಪ್ರಾಥಮಿಕ ವಿಭಾಗದಲ್ಲಿ ಎಚ್.ಎನ್.ಸಿದ್ದಾರ್ಥ(ಪ್ರ), ವಿಕಾಸ್ ವೈಭವ್(ದ್ವಿ), ನೂರ್ ಸಬಿಷಾ(ತೃ), ಹರಿಪ್ರಿಯಾ(ಸಮಾಧಾನಕರ ಬಹುಮಾನ), ಪ್ರೌಢಶಾಲಾ ವಿಭಾಗದಲ್ಲಿ ಎಚ್.ಬಿ.ವಿಷ್ಣುಪ್ರಸಾದ್(ಪ್ರ), ಕೆ.ಎಸ್.ದಿಶಾ(ದ್ವಿ), ಮೋಹನ್‌ಬಾಬು(ತೃ) ಹಾಗೂ ವಿದುಷಿ ಜೈನ್(ಸಮಾಧಾನಕರ ಬಹುಮಾನ) ಪಡೆದರು.