ಕಿಕ್ಕೇರಿಯ ಮಂಜುನಾಥಸ್ವಾಮಿ ಪಾದಯಾತ್ರೆ ಸೇವಾ ಸಮಿತಿಯಿಂದ ಸೋಮವಾರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳಲಾಯಿತು. ಮಂಜು, ಹೋಬಳಿಯ ವಿವಿಧ ಗ್ರಾಮಗಳ ಸದ್ಭಕ್ತರು ಹಾಜರಿದ್ದರು.
ಕಿಕ್ಕೇರಿ: ಆರೋಗ್ಯಕರ ಜೀವನದೊಂದಿಗೆ ಮಾನಸಿಕ ನೆಮ್ಮದಿ, ಧಾರ್ಮಿಕ ಜಾಗೃತಿಗೆ ಕಾಲ್ನಡಿಗೆಯಂತಹ ಪಾದಯಾತ್ರೆ ಉತ್ತಮವಾಗಿದೆ ಎಂದು ಜನಜಾಗೃತಿ ವೇದಿಕೆ ನಿರ್ದೇಶಕ ಮೊಟ್ಟೆ ಮಂಜು ಹೇಳಿದರು.
ಕಿಕ್ಕೇರಿಯಿಂದ ಮಂಜುನಾಥಸ್ವಾಮಿ ಪಾದಯಾತ್ರೆ ಸೇವಾ ಸಮಿತಿಯಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಮಹಾಶಿವರಾತ್ರಿ ದೇಗುಲ ದರ್ಶನಕ್ಕೆ ಸೋಮವಾರ ಆರಂಭಗೊಂಡ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾನ ಮನಸ್ಕರನ್ನು ಸಂಘಟಿಸಿ ಪಾದಯಾತ್ರೆ ಮೂಲಕ ಧಾರ್ಮಿಕ ಜಾಗೃತಿ, ಭಗವಂತನ ಆರಾಧನೆಗೆ ಕಾಳಜಿ ವಹಿಸಿರುವುದು ಒಳ್ಳೆಯ ಬೆಳವಣಿಗೆ. ಕಿರಿಯರು, ಯುವಕರಲ್ಲಿ ಧಾರ್ಮಿಕ ಭಾವನೆ ಮೂಡಲು ಇಂತಹ ಯಾತ್ರೆ ಅವಶ್ಯವಿದೆ ಎಂದರು.
ಶ್ರೀ ಕ್ಷೇತ್ರಕ್ಕೆ ಹೋಬಳಿಯ ಜನತೆ ಮತಬೇಧ ಮರೆತು ಸಂಘಟಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಸನಾತನ ಸಂಸ್ಕೃತಿಯ ದೇಶ ನಮ್ಮದಾಗಿದೆ. ಹಿಂದೂ ರಾಷ್ಟ್ರದಲ್ಲಿ ಇಂತಹ ಕಾಲ್ನಡಿಗೆಯಂತಹ ಯಾತ್ರೆಗಳು ಎಲ್ಲೆಡೆ ನಡೆಯಬೇಕಿದೆ. ಹಿರಿಯರು, ಕಿರಿಯರಲ್ಲಿ ಉತ್ತಮ ಬಾಂಧವ್ಯ ಮೂಡಲಿದೆ. ಇಂತಹ ಸತ್ಕಾರ್ಯಗಳಿಂದ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ಭಯಭಕ್ತಿ ಉಳಿಯಲಿದೆ ಎಂದರು.
ಒಂದಿಬ್ಬರು ಕೂಡಿಕೊಂಡು ಆರಂಭಿಸಲಾದ ಈ ಪಾದಯಾತ್ರೆಗೆ ಇಂದು ಅನೇಕರು ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಗ್ರಾಮದ ಜನರಲ್ಲಿ ಮಧುರವಾದ ಬಾಂಧವ್ಯ ಮೂಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಇಲ್ಲಿನ ಸಿಂಗಮ್ಮ ದೇಗುಲದಲ್ಲಿ ಪಾದಯಾತ್ರಿಗಳ ಯಾತ್ರೆ ಶುಭಕರವಾಗಲು ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ಸದ್ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.