ಮಂಡ್ಯ ನಗರದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಮಹಿಳಾ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳಾಗಿ ಆದೇಶ ಪ್ರತಿ ವಿತರಿಸಿದರು.
ಮಂಡ್ಯ: ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಪದಾಧಿಕಾರಿಗಳಾಗಿ ನೇಮಕಗೊಂಡಿರುವವರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಅವರು ತಮ್ಮ ನಿವಾಸದಲ್ಲಿ ನೇಮಕಾತಿ ಪತ್ರದ ಆದೇಶ ಪ್ರತಿ ಹಾಗೂ ಗುರುತಿನ ಚೀಟಿ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ನೂತನ ಮಹಿಳಾ ಪದಾಧಿಕಾರಿಗಳು ಜಿಲ್ಲಾದ್ಯಂತ ಪಕ್ಷದ ಸಂಘಟನೆಗೆ ಮುಂದಾಗಬೇಕು. ರಾಜ್ಯಸರ್ಕಾರದ ಜನಪರ ಯೋಜನೆಗಳ ಬಗ್ಗೆ ತಿಳಿಸಬೇಕು. ಮುಖ್ಯವಾಗಿ ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ ಯೋಜನೆಗಳಿಂದಾಗುತ್ತಿರುವ ಅನುಕೂಲದ ಬಗ್ಗೆ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಚ್.ಬಿ.ಶುಭದಾಯಿನಿ ಮಾತನಾಡಿ, ಪಕ್ಷದಲ್ಲಿ ವಿವಿಧ ಹುದ್ದೆಗೆ ನೇಮಕಗೊಂಡಿರುವವರು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಜತೆಗೆ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಮಹಿಳಾ ಪದಾಧಿಕಾರಿಗಳಾದ ಮಂಗಳಾ ಶಂಕರಲಿಂಗೇಗೌಡ, ಶಶಿಕಲಾ, ಶಾರದಾ ರಮೇಶ್‌ರಾಜ್, ರಾಧಾ, ಪದ್ಮಾ ಮೋಹನ್, ಜ್ಯೋತಿ, ವೀಣಾ ಶಂಕರ್, ಚಂದ್ರಕಲಾ, ಪದ್ಮಾ, ಜಯಲಕ್ಷ್ಮೀ, ಗೀತಾ ಇತರರಿದ್ದರು. ಇದೇ ಸಂದರ್ಭದಲ್ಲಿ ಕಲ್ಲಹಳ್ಳಿಯ ಚಂದ್ರಿಕಾ ಉಮೇಶ್ ಅವರು ಬಿಜೆಪಿ ತೊರೆದು ಶಾಸಕ ಪಿ.ರವಿಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.