ಆರ್.ಸೋಮಶೇಖರ್ ಪುರಸಭೆ ಮಾಜಿ ಸದಸ್ಯ. 
ಮಂಡ್ಯ

176 ನಿವೇಶನಗಳ ಹಂಚಿಕೆಗೆ ವಿರೋಧ

ಪ್ರಮುಖ ಮುಖ್ಯಾಂಶಗಳು

  • 25 ರಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಬೃಹತ್ ಪ್ರತಿಭಟನೆ
  • ಪುರಸಭೆ ಮಾಜಿ ಅಧ್ಯಕ್ಷ ಆರ್.ಸೋಮಶೇಖರ್ ಮಾಹಿತಿ
ಪಾಂಡವಪುರ: ಪಟ್ಟಣದ ಹಾರೋಹಳ್ಳಿ ಸಮೀಪದಲ್ಲಿರುವ 176 ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನಡೆ ಸರಿಯಲ್ಲ. ಪಟ್ಟಣ ವ್ಯಾಪ್ತಿಯಲ್ಲಿರುವ ಸಾವಿರಾರು ಬಡವರಿಗೆ ಏಕಕಾಲಕ್ಕೆ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಮೇ 25 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಆರ್.ಸೋಮಶೇಖರ್ ತಿಳಿಸಿದರು.
ಪಟ್ಟಣದಲ್ಲಿರುವ ಎಲ್ಲ ವರ್ಗದ ಬಡವರನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು. ಪುರಸಭೆ ಅಧಿಕಾರಿಗಳು ಶ್ವೇಚ್ಛಾಚಾರದಿಂದ ವರ್ತಿಸುತ್ತಿದ್ದಾರೆ. ಇಲ್ಲಿನ ಮುಖ್ಯಾಧಿಕಾರಿ ಸರ್ವಾಧಿಕಾರಿಯಾಗಿದ್ದು, ಶಾಸಕರು ಮತ್ತು ಪುರಸಭೆ ಮಾಜಿ ಸದಸ್ಯರ ಮಾತಿಗೆ ಮನ್ನಣೆ ಕೊಡದೆ ಮಧ್ಯವರ್ತಿಗಳ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಹಾಗಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಮೇ 25ರಂದು ಬೆಳಗ್ಗೆ ಪಟ್ಟಣದ ಐದು ದೀಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಪುರಸಭೆ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪುರಸಭೆ ಚುನಾವಣೆಯ ಸಮೀಪಿಸುತ್ತಿದೆ ಎಂಬ ಕಾರಣಕ್ಕೆ ನಿವೇಶನಗಳನ್ನು ಹಂಚಿಕೆ ಮಾಡಲು ಶಾಸಕರು ಮುಂದಾಗಿದ್ದಾರೆ. ಪುರಸಭೆ ಅಧಿಕಾರಿಗಳು ಶಾಸಕರ ದಾರಿ ತಪ್ಪಿಸುತ್ತಿದ್ದಾರೆ. ಹಾರೋಹಳ್ಳಿ ಬಳಿ ಇರುವ 176 ನಿವೇಶನಗಳ ಪೈಕಿ ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ, ಅಗ್ನಿಶಾಮಕ ದಳದ ಠಾಣೆ ನಿರ್ಮಾಣಕ್ಕೆ ಜಮೀನು ಕೊಟ್ಟ ರೈತರು ಮತ್ತು ರಸ್ತೆಗಾಗಿ ನಿವೇಶನ ಕಳೆದುಕೊಂಡಿರುವ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಮಾಡಲು 60ಕ್ಕೂ ಹೆಚ್ಚು ನಿವೇಶನಗಳನ್ನು ನಿಗದಿಪಡಿಸಿ ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಿಗದಿತ ಉದ್ದೇಶಕ್ಕೆ ಈ ಸೈಟುಗಳು ಹಂಚಿಕೆಯಾದರೆ ಬಡವರಿಗೆ ಹಂಚಿಕೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನ ಸಿಗುವುದಿಲ್ಲ. ಹೀಗಾಗಿ, ನಿವೇಶನ ಹಂಚಿಕೆ ವಿಚಾರ ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಪಟ್ಟಣದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ನಿವೇಶನಕ್ಕಾಗಿ 700 ಅರ್ಜಿಗಳು ಸಲ್ಲಿಕೆಯಾಗಿದ್ದು, ಹಲವು ಷರತ್ತುಗಳೊಂದಿಗೆ ಕೇವಲ ಒಂದು ತಿಂಗಳ ಕಾಲಾವಧಿ ನೀಡಿ ಅರ್ಜಿ ಸ್ವೀಕರಿಸಲಾಗಿದೆ. ಆದಾಯ ಮತ್ತು ಜಾತಿ ದೃಢೀಕರಣ ಪತ್ರ, ಪ್ರಮಾಣ ಪತ್ರ ಇನ್ನಿತರ ದಾಖಲೆಗಳನ್ನು ಒದಗಿಸಲು ಕಾಲಾವಕಾಶವನ್ನೇ ನೀಡಿಲ್ಲ. ಹೀಗಾಗಿ, ನೂರಾರು ಫಲಾನುಭವಿಗಳು ಅರ್ಜಿಯನ್ನೇ ಸಲ್ಲಿಸಲು ಸಾಧ್ಯವಾಗಿಲ್ಲ. ಪಟ್ಟಣದ ಹೇಮಾವತಿ ಬಡಾವಣೆಯ ಹಿಂಭಾಗ ಕಂದಾಯ ಇಲಾಖೆಗೆ ಸೇರಿರುವ ಜಮೀನು ಇದೆ. ಸರ್ವೇ ಮೂಲಕ ಭೂಮಿ ಗುರುತಿಸಿ ನಿಯಮದಂತೆ ನಿವೇಶನ ಹಂಚಿಕೆ ಮಾಡಬೇಕು, ಅದನ್ನು ಬಿಟ್ಟು ಚುನಾವಣೆಗಾಗಿ ನಿವೇಶನ ಹಂಚಿಕೆ ಮಾಡಬಾರದು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಗಿರೀಶ್, ಹಾರೋಹಳ್ಳಿ ಎ.ಕೃಷ್ಣ, ಚಂದ್ರು, ಶಿವಕುಮಾರ್, ಜ್ಯೋತಿ ಲಕ್ಷ್ಮೀಬಾಬು, ಸುನೀತಾ ಯಶವಂತ್, ಟಿಎಪಿಸಿಎಂಎಸ್ ನಿರ್ದೇಶಕ ಪಿ.ಎಲ್.ಆದರ್ಶ, ಮುಖಂಡರಾದ ಸಗಾಯಂ, ಟೌನ್ ಚಂದ್ರು, ಹಾರೋಹಳ್ಳಿ ಪವನ್, ಆರುಮುಗಂ, ಗುರು ಇದ್ದರು.