ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದಲ್ಲಿ 2.40 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ ಗುದ್ದಲಿ ಪೂಜೆ ನೆರವೇರಿಸಿದರು. ಪಿ.ಸಂದರ್ಶ, ನಾಗೇಗೌಡ, ಅಶೋಕ್, ರಾಮಚಂದ್ರ, ಸೋಮಾಚಾರಿ, ಮಹದೇವು ಇದ್ದರು.
ಮದ್ದೂರು: ತಾಲೂಕಿನ ಚಾಮನಹಳ್ಳಿ, ಸೋಮನಹಳ್ಳಿ, ಗೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಗಳು ನಗರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಈಗಾಗಲೇ ಪ್ರಕ್ರಿಯೆ ಮುಗಿದಿರುವ ಜತೆಗೆ ಕಾರ್ಯವು ಚಾಲ್ತಿಯಲ್ಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಹೆಬ್ಬೆರಳು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಬಳಿಕ ಅವರು ಮಾತನಾಡಿ, ಈಗಾಗಲೇ ನಾಲ್ಕು ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳು ನಗರಸಭೆಗೆ ಒಳಪಟ್ಟಿದ್ದು, ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಜತೆಗೆ ಕೆಲ ಪ್ರಕ್ರಿಯೆಗಳು ಚಾಲ್ತಿಯಲ್ಲಿರುವುದಾಗಿ ತಿಳಿಸಿದರು.
ಅಭಿವೃದ್ಧಿಯನ್ನು ಸಹಿಸದ ವಿರೋಧ ಪಕ್ಷದವರು ರಾಜಕೀಯ ದುರುದ್ದೇಶಕ್ಕಾಗಿ ಪ್ರತಿಭಟನಾಕಾರರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗುತ್ತಿದ್ದು, ನಾನು ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಅನುದಾನವನ್ನು ತಂದು ಅಭಿವೃದ್ಧಿ ಕೈಗೊಂಡಿದ್ದೇನೆ. ಆದರೂ ಅಭಿವೃದ್ಧಿಯನ್ನು ಸಹಿಸದವರು ನಮ್ಮ ಮೇಲೆ ನಿರಂತರವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಇದಕ್ಕೆ ಉತ್ತರ ಕೊಡುವ ಅಗತ್ಯವಿಲ್ಲ ಎಂದರು.
ನನ್ನ ಪಾತ್ರವಿಲ್ಲ: ಗೊರವನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಉಪ್ಪಿನಕೆರೆ, ಚನ್ನಸಂದ್ರ ಗ್ರಾಮಗಳು ನಗರಕೆರೆ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಸಂಬಂಧ ಅಧಿಕಾರಿಗಳು ಗೊರವನಹಳ್ಳಿ ಗ್ರಾಪಂ ಕಚೇರಿಯಲ್ಲಿದ್ದ ಕಡತಗಳನ್ನು ಗ್ರಾ.ಪಂ.ಅಧಿಕಾರಿಗಳು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಪ್ರತಿಭಟನಾಕಾರರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದರಲ್ಲಿ ತಮ್ಮ ಪಾತ್ರವಿಲ್ಲವೆಂದು ಸ್ಪಷ್ಟನೆ ನೀಡಿದರು.
ನಗರಕೆರೆ ಗ್ರಾಪಂ ಪಿಡಿಒ ಮತ್ತು ಸಂಬಂಧಿಸಿದ ಅಧಿಕಾರಿಗಳು ಉಪ್ಪಿನಕೆರೆ ಹಾಗೂ ಚನ್ನಸಂದ್ರ ಗ್ರಾಮಕ್ಕೆ ಸಂಬಂಧಿಸಿದ ಕಡತಗಳನ್ನು ತೆಗೆದುಕೊಂಡು ಹೋಗಲು ನಮಗೆ ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮ ವಹಿಸುವ ಜತೆಗೆ ಅಧಿಕಾರಿಗಳಿಗೆ ಭದ್ರತೆ ಒದಗಿಸಿ ಗ್ರಾಮಗಳ ಕಡತಗಳನ್ನು ಕಾನೂನು ಪ್ರಕಾರವೇ ತೆಗೆದುಕೊಂಡು ಹೋಗಲು ಅನುಕೂಲ ಕಲ್ಪಿಸಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗೇಗೌಡ, ಮುಖಂಡರಾದ ಅಶೋಕ್, ರಾಮಚಂದ್ರ, ಸೋಮಾಚಾರಿ, ಮಹದೇವು, ಟಿ.ಲಿಂಗಯ್ಯ, ರಘು, ಸತೀಶ್, ನಾಗರಾಜು ಹಾಜರಿದ್ದರು.