ಕೊಡಗು ಜಿಲ್ಲೆಯಿಂದ ಹೊರಟಿದ್ದ ರೈತರನ್ನು ತಡೆದು ಬಂಧನ ಮಾಡಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಮದ್ದೂರು ಪ್ರವಾಸಿ ಮಂದಿರದಲ್ಲಿ ಶನಿವಾರ ಪ್ರತಿಭಟಿಸಲಾಯಿತು. ವಿ.ಸಿ.ಉಮಾಶಂಕರ್, ಕೀಳಘಟ್ಟ ನಂಜುಂಡಯ್ಯ, ವಿ.ಎಚ್.ಪ್ರಭುಲಿಂಗು, ಅಣ್ಣೂರು ಮಹೇಂದ್ರ, ಪುಟ್ಟಸ್ವಾಮಿ, ವೆಂಕಟೇಶ್ ಇದ್ದರು. 
ಮಂಡ್ಯ

ಕೊಡಗಿನ ರೈತರ ಬಂಧನಕ್ಕೆ ಮದ್ದೂರಲ್ಲಿ ವಿರೋಧ

ಮದ್ದೂರು: ಬಿಡದಿಯ ಟೌನ್‌ಶಿಪ್ ಯೋಜನೆಗೆ ರೈತರ ಕೃಷಿ ಭೂಮಿ ವಶಪಡಿಸಿಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬೈರಮಂಗಲ ಬಳಿ ನಡೆಯುತ್ತಿರುವ ರೈತ ಚಳವಳಿ ಬೆಂಬಲಿಸಲು ಕೊಡಗು ಜಿಲ್ಲೆಯಿಂದ ಹೊರಟಿದ್ದ ರೈತರನ್ನು ತಡೆದು ಬಂಧನ ಮಾಡಿರುವುದನ್ನು ಖಂಡಿಸಿ, ರಾಜ್ಯ ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಕೊಡಗು ಜಿಲ್ಲೆಯಿಂದ 4 ಬಸ್ ಹಾಗೂ 30 ಕಾರುಗಳಲ್ಲಿ ವಿವಿಧ ತಾಲೂಕುಗಳಿಂದ ಬಿಡದಿಯ ಬೈರಮಂಗಲ ಬಳಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಲು ಹೊರಟಿರುವ ರೈತರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೊಡಗಿನ ಗಡಿ ಭಾಗ ತಿತಿಮತಿ, ಗೋಣಿಕೊಪ್ಪ ಹಾಗೂ ಸೋಮವಾರಪೇಟೆಯಲ್ಲಿ ವಾಹನ ತಡೆದು ರೈತರನ್ನು ಸಂಜೆವರೆಗೆ ವಶಕ್ಕೆ ಪಡೆದಿರುವುದನ್ನು ಖಂಡಿಸಿದರು.
ತಾಲೂಕು ರೈತ ಸಂಘ ಅಧ್ಯಕ್ಷ ಎಚ್.ಜಿ.ಪ್ರಭುಲಿಂಗ ಮಾತನಾಡಿ, ರಾಜ್ಯದ 31 ಜಿಲ್ಲೆಗಳಲ್ಲೂ ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳು ಚಳವಳಿ ಬೆಂಬಲಿಸುತ್ತಿವೆ. ಆದರೆ ಕೊಡಗು ಜಿಲ್ಲೆಯ ಪೊಲೀಸರು ರೈತರನ್ನು ಬಂಧಿಸಿರುವ ಕ್ರಮ ಸರಿಯಲ್ಲ ಎಂದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯ ಖಂಡಿಸಿ ನಾಡಿನ ಉದ್ದಗಲಕ್ಕೂ ಪ್ರತಿಭಟಿಸುವ ಹಾಗೂ ಪ್ರಶ್ನಿಸುವ ಹಕ್ಕಿದೆ. ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವ ಪೊಲೀಸರ ಕ್ರಮ ಸರಿಯಲ್ಲ. ಆದ್ದರಿಂದ ಕೊಡಗು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು ಹಾಗೂ ಇಂತಹ ಕೃತ್ಯಗಳು ಮರುಕಳಿಸಬಾರದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ರೈತ ಮುಖಂಡ ಅಣ್ಣೂರು ಮಹೇಂದ್ರ, ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಪಣ್ಣೆ ದೊಡ್ಡಿ ವೆಂಕಟೇಶ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಕೋಣಸಾಲೆ ಕೃಷ್ಣ, ವಿ.ಎಚ್.ರವಿ, ಶ್ರೀನಿವಾಸ್ ಹಾಜರಿದ್ದರು.