ಮದ್ದೂರಿನ ನಗರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಅರಣ್ಯ ಇಲಾಖೆಯಿಂದ ಸಾರ್ವಜನಿಕರ ಸಭೆ ಆಯೋಜಿಸಲಾಗಿತ್ತು. ರಘು, ಮಹದೇವಸ್ವಾಮಿ, ಗವಿಯಪ್ಪ, ರಾಧಿಕಾ ಇತರರು ಇದ್ದರು. 
ಮಂಡ್ಯ

ಪೇಟೆಬೀದಿ ವಿಸ್ತರಣೆಗೆ ಅಭಿಪ್ರಾಯ ಸಂಗ್ರಹ

ಮದ್ದೂರು: ಪಟ್ಟಣದ ಪೇಟೆಬೀದಿಯನ್ನು 80 ಅಡಿಗೆ ವಿಸ್ತರಿಸುವ ಕಾಮಗಾರಿ ಸಂಬಂಧ 286 ಮರಗಳ ತೆರವಿಗಾಗಿ ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯ ಸಂಗ್ರಹಿಸಲಾಯಿತು.
ನಗರದ ನಗರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಅರಣ್ಯ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಸಲಹೆ-ಸೂಚನೆ ನೀಡಿದರು.
ಹಲವು ವರ್ಷಗಳಿಂದ ಪಟ್ಟಣವಾಗಿದ್ದ ಮದ್ದೂರು ಅಭಿವೃದ್ಧಿ ವಿಷಯದಲ್ಲಿ ಹಿಂದುಳಿದಿತ್ತು. ಕೆ.ಎಂ.ಉದಯ್ ಶಾಸಕರಾದ ಬಳಿಕ ಪುರಸಭೆಯಾಗಿದ್ದ ಮದ್ದೂರನ್ನು ನಗರಸಭೆಯನ್ನಾಗಿಸಿದ್ದಾರೆ. ಅದರ ಜತೆಗೆಯೇ ಪಟ್ಟಣದ ಕಿರಿದಾದ ಪೇಟೆಬೀದಿಯನ್ನು 80 ಅಡಿಗೆ ವಿಸ್ತರಿಸುವ ಮೂಲಕ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ. ಅದಕ್ಕೆ ನಾವು ಸಹಕರಿಸಬೇಕೆಂದು ಪಟ್ಟಣ ನಿವಾಸಿಗಳಾದ ಸಂತೋಷ್‌ಗೌಡ, ಪಿ.ಸಂದರ್ಶ, ಸಚಿನ್, ಸಂತೋಷ್, ವೆಂಕಟೇಶ್, ಹರೀಶ್, ಲಕ್ಷ್ಮಣ್, ಶಿವನಂಜಯ್ಯ, ರಿತೇಶ್, ಇಂತಿಯಾಜ್‌ವುಲ್ಲಾ ಖಾನ್, ಕೀರ್ತಿ, ಶಿವಪುರ ಅನಿಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪೇಟೆಬೀದಿ ವಿಸ್ತರಣೆಗೊಳಿಸಿದ ಬಳಿಕ ತೆರವುಗೊಳಿಸಲಾದ ಮರಗಳಿಗಿಂತ 10 ಪಟ್ಟು ಹೆಚ್ಚು ಗಿಡಗಳನ್ನು ನೂತನ ರಸ್ತೆಯಾದ ತಕ್ಷಣವೇ ಪೇಟೆಬೀದಿ ಸೇರಿದಂತೆ ನಗರದ ವ್ಯಾಪ್ತಿಯ ಹಲವೆಡೆ ನೆಟ್ಟು ಪೋಷಿಸಬೇಕು. ಅದಕ್ಕಾಗಿ ಅರಣ್ಯ ಇಲಾಖೆ ಹಾಗೂ ನಗರಸಭೆಯ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ರಸ್ತೆ ಅಭಿವೃದ್ಧಿಯಾಗಬೇಕಾದರೆ ಕೆಲವೊಮ್ಮೆ ಮರಗಳನ್ನು ತೆರವುಗೊಳಿಸುವ ಅನಿವಾರ್ಯತೆ ಉಂಟಾಗುತ್ತದೆ. ಉತ್ತಮ ರಸ್ತೆ ವಿಸ್ತರಣೆವಾಗುತ್ತಿರುವ ಸಂದರ್ಭ ಸುಖಾಸುಮ್ಮನೆ ವಿರೋಧ ಸರಿಯಲ್ಲ, ರಸ್ತೆ ವಿಸ್ತರಣೆಗೆ ನಮ್ಮ ಸಹಮತವಿದೆ ಎಂದು ಬೆಂಬಲ ಸೂಚಿಸಿದರು.
ಪಟ್ಟಣ ನಿವಾಸಿ ಎಂ.ಸಿ.ಲಿಂಗರಾಜು ಮಾತನಾಡಿ, ಅಧಿಕಾರಿಗಳು ಯಾವ ಮಾನದಂಡದಡಿ ಎಷ್ಟು ಮರಗಳನ್ನು ತೆರವುಗೊಳಿಸುತ್ತಾರೆ? ಈ ಬಗ್ಗೆ ಡಿಪಿಆರ್ ಆಗಿದಿದೆಯೇ? ಎಂದು ಜನರಿಗೆ ಮೊದಲು ಮಾಹಿತಿ ನೀಡಬೇಕು. ಬಳಿಕ ಸಾರ್ವಜನಿಕರ ಅಭಿಪ್ರಾಯ ಪಡೆದು ತಿರ್ಮಾನ ತೆಗೆದುಕೊಳ್ಳಬೇಕು ಎಂದರು. ಇದಕ್ಕೆ ಎಂ.ಪಿ.ಮಂಜುನಾಥ್, ಸುನೀಲ್, ಬಸವರಾಜು, ಗೊರವನಹಳ್ಳಿ ಪ್ರಸನ್ನ ಧ್ವನಿಗೂಡಿಸಿದರು.
ರಾಜ ಮಹಾರಾಜರ ಕಾಲದಲ್ಲಿ ನೆಟ್ಟು ಬೆಳೆಸಿದ ಮರಳು ಇಂದು ಪಕ್ಷಿಗಳಿಗೆ ಆಶ್ರಯತಾಣವಾಗಿವೆ. ಜನರಿಗೆ ನೆರಳಾಗಿವೆ. ಆದ್ದರಿಂದ ಹೆಮ್ಮರವಾಗಿ ಬೆಳೆದು ನಿಂತಿರುವ ಮರಗಳನ್ನು ತೆರವು ಮಾಡಲೇ ಬೇಕಿದ್ದರೆ ರಸ್ತೆ ವಿಸ್ತರಣೆ ಪ್ರಮಾಣ ಕಡಿತಗೊಳಿಸಿ, ಭಾರಿ ಗಾತ್ರದ ಮರಗಳನ್ನು ಕಡಿಯಬೇಡಿ ಎಂದು ಒತ್ತಾಯಿಸಿದರು.
ಮಂಡ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ರಘು ಪ್ರತಿಕ್ರಿಯಿಸಿ, ಒಂದು ಮರ ತೆರವುಗೊಳಿಸಿದರೆ ಬದಲಿಗೆ 10 ಗಿಡಗಳನ್ನು ನೆಡುವುದಕ್ಕೆ ಇಲಾಖೆಯಿಂದ ಕ್ರಮ ಕೈಗೊಳ್ಳುತ್ತೇವೆ. ಅಷ್ಟೆ ಅಲ್ಲದೆ ನಿಮ್ಮ ಅಭಿಪ್ರಾಯಗಳೊಂದಿಗೆ ಇಲಾಖೆಯ ಅಗತ್ಯ ಮಾರ್ಗಸೂಚಿ ಪಾಲಿಸುತ್ತೇವೆ ಎಂದರು.
ಸಭೆಯಲ್ಲಿ ಮಂಡ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಸ್ವಾಮಿ, ಮದ್ದೂರು ವಲಯ ಅರಣ್ಯ ಅಧಿಕಾರಿ ಗವಿಯಪ್ಪ, ಪೌರಾಯುಕ್ತೆ ರಾಧಿಕಾ, ಅಧಿಕಾರಿಗಳಾದ ಕಾಂತರಾಜು, ರಘುನಂದನ್, ಶ್ರೀಧರ್, ಪುಟ್ಟಸ್ವಾಮಿ ಸೇರಿದಂತೆ ಪುರಸಭೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.