ಮಳವಳ್ಳಿ ತಾಲೂಕಿನ ಶೆಟ್ಟಹಳ್ಳಿಯಲ್ಲಿ ಸೋಮವಾರ ಬೆಳಗಿನ ಜಾವ ದುಷ್ಕರ್ಮಿಗಳು ಪಿಸ್ತೂಲಿನಿಂದ ಫೈರಿಂಗ್ ಮಾಡಿದ ಮನೆಯ ಸ್ಥಳವನ್ನು ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. 
ಮಂಡ್ಯ

ಮನೆಯ ಮೇಲೆ ಪಿಸ್ತೂಲ್‌ನಿಂದ ಫೈರಿಂಗ್

ಲಲಾಟಾಕ್ಷ ಎಸ್
ಮಳವಳ್ಳಿ: ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಹೊರ ವಲಯದ ಮನೆಯೊಂದರ ಮೇಲೆ ಸೋಮವಾರ ಬೆಳಗಿನ ಜಾವ ಅಪರಿಚಿತ ವ್ಯಕ್ತಿಗಳ ಗುಂಪೊಂದು ಪಿಸ್ತೂಲ್‌ನಿಂದ ಸಾಕು ನಾಯಿಗೆ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದೆ.
ಶೆಟ್ಟಹಳ್ಳಿ ಗ್ರಾಮದ ರಾಚಯ್ಯ ಅವರ ಪುತ್ರ ಶಿವಕುಮಾರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ ಎರಡು ಗಂಟೆ ಸುಮಾರಿನಲ್ಲಿ ಬೈಕ್‌ವೊಂದರಲ್ಲಿ ಬಂದ ಮೂವರು ಅಪರಿಚಿತರು ಮನೆಯ ಬಾಗಿಲು ಬಡಿದ್ದಾರೆ. ಈ ವೇಳೆ ಸಾಕು ನಾಯಿ ಬೊಗಳಲು ಪ್ರಾರಂಭಿಸಿದೆ. ಕೂಡಲೇ ಪಿಸ್ತೂಲ್ ಶಬ್ದ ಕೇಳಿ ಕುಟುಂಬಸ್ಥರು ಗಾಬರಿಗೊಂಡು ಬಾಗಿಲು ತೆರೆದಿಲ್ಲ. ನಾಯಿ ಬೊಗಳುವುದನ್ನು ನಿಲ್ಲಿಸಿದಾಗ ಕೆಲ ಸಮಯ ನಿಶ್ಯಬ್ದವಾಗಿರುವುದನ್ನು ಗಮನಿಸಿ ಕುಟುಂಬಸ್ಥರು ಮನೆಯಿಂದ ಹೊರಬಂದು ನೋಡಿದಾಗ ನಾಯಿ ಗುಂಡು ತಗುಲಿ ಮೃತಪಟ್ಟಿರುವುದನ್ನು ಕಾಣಿಸಿತು. ಅಷ್ಟರಲ್ಲಿ ಬೈಕ್‌ನಲ್ಲಿ ಮೂವರು ಅಪರಿಚಿತರು ವಾಪಸ್ ಮನೆ ಕಡೆ ಬರುವುದನ್ನು ಕಂಡು ಕೂಡಲೇ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.
ವಾಪಸ್ ಮನೆಯ ಬಳಿ ಬಂದ ಅಪರಿಚಿತರು ಬಾಗಿಲು ತೆಗೆಯುವಂತೆ ಬೆದರಿಕೆ ಹಾಕಿದ್ದಾರೆ. ಬಾಗಿಲು ತೆರೆಯದಿದ್ದಾಗ ಕಿಟಕಿ ಮೂಲಕ ಎರಡು ಸುತ್ತು ಗುಂಡು ಹಾರಿಸಿ ಬೆದರಿಸಿದ್ದಾರೆ. ಇದರಿಂದ ಕಿಟಕಿಯ ಗಾಜುಗಳು ಪುಡಿ ಪುಡಿಯಾಗಿದ್ದು ಜೀವಭಯದಿಂದ ಮನೆಯೊಳಗಿದ್ದವರು ರಕ್ಷಣೆಗಾಗಿ ಜೋರಾಗಿ ಚೀರಾಡತೊಡಗಿದಾಗ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಸುಮಾರು 25 ರಿಂದ 30 ವರ್ಷದ ಮೂವರು ದುಷ್ಕರ್ಮಿಗಳು ಒಂದೇ ಬೈಕ್‌ನಲ್ಲಿ ಬಂದಿದ್ದರು. ಮುಖಕ್ಕೆ ಬ್ಯಾಟರಿ ಚಾಲಿತ ಹೆಲ್ಮೆಟ್ ಹಾಕಿಕೊಂಡಿದ್ದರು ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾ ನಮ್ಮನ್ನು ಬೈಯುತ್ತಿದ್ದರು ಎಂದು ಮನೆಯ ಮಾಲೀಕ ಶಿವಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಪರಿಚಿತರು ಪರಾರಿಯಾಗುತ್ತಿದ್ದಂತೆ ಮನೆ ಮಾಲೀಕ ಶಿವಕುಮಾರ್ ಪೊಲೀಸ್ ಸಹಾಯವಾಣಿ ಸಂಖ್ಯೆ ಹಾಗೂ ಮಂಡ್ಯ ಎಸ್ಪಿ ಅವರಿಗೆ ಮೊಬೈಲ್‌ನಿಂದ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವು ದೊರೆತಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಆಗಮಿಸಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದರು. ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಯಶವಂತ್ ಕುಮಾರ್, ಇನ್‌ಸ್ಪೆಕ್ಟರ್ ಬಸವರಾಜು ಹಾಗೂ ಸಿಬ್ಬಂದಿ ಇದ್ದರು.