ಮಂಡ್ಯದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿದರು.  
ಮಂಡ್ಯ

ಸಾರ್ವಜನಿಕರ ದೂರಿಗೆ ಕ್ರಮ ವಹಿಸಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಜನರು ಸಲ್ಲಿಸುವ ದೂರಿಗೆ ಕ್ರಮ ವಹಿಸಿ
  • ಜಿಲ್ಲಾ ಪಂಚಾಯಿತಿಗೆ ಅನುಪಾಲನಾ ವರದಿ ಸಲ್ಲಿಸಿ
  • ಜ.30ರೊಳಗೆ ಎಲ್ಲ ಗ್ರಾ.ಪಂ.ಗಳಲ್ಲಿಯೂ ಅಭಿಲೇಖಾಲಯ ಇರಬೇಕು
ಮಂಡ್ಯ: ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಸ್ವೀಕೃತವಾಗಿರುವ ಅರ್ಜಿಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮವಹಿಸಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸುವಂತೆ ತಾಪಂ ಇಒಗಳಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.
ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಆನ್‌ಲೈನ್ ಸಭೆಯಲ್ಲಿ ಮಾತನಾಡಿದ ಅವರು, ಗ್ರಾ.ಪಂ, ತಾ.ಪಂ. ಮತ್ತು ಜಿ.ಪಂ ಕಚೇರಿಯಲ್ಲಿ ಪ್ರತೀ ಸೋಮವಾರ ಸಾರ್ವಜನಿಕ ಕುಂದುಕೊರತೆ ಸಭೆ ಆಯೋಜಿಸಲಾಗುತ್ತಿದೆ. ಆ ಸಭೆಯಲ್ಲಿ ಸ್ವೀಕೃತವಾಗುವ ಅರ್ಜಿಗೆ ಸಂಬಂಧಿಸಿದಂತೆ ವಹಿಗಳನ್ನು ನಿರ್ವಹಿಸಿ. ಪ್ರತಿ ಅರ್ಜಿಗೂ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ವಿವರಗಳೊಂದಿಗೆ ವರದಿಯನ್ನು ನಿಗದಿತ ಅವಧಿಯೊಳಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಜ.30ರೊಳಗೆ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿಯೂ ಅಭಿಲೇಖಾಲಯ ಇರಬೇಕು. ಈಗಾಗಲೇ ಈ ಬಗ್ಗೆ ಹಲವಾರು ಬಾರಿ ತಿಳಿಸಲಾಗಿತ್ತು. ಪ್ರಸ್ತುತ 180 ಗ್ರಾಪಂನಲ್ಲಿ ಅಭಿಲೇಖಾಲಯ ಸುಸಜ್ಜಿತವಾಗಿ ನಿರ್ವಹಣೆಯಾಗುತ್ತಿದೆ. ಉಳಿದ ಗ್ರಾ.ಪಂ.ಗಳಲ್ಲಿಯೂ ನಿರ್ವಹಣೆಗೆ ಅಗತ್ಯ ಕ್ರಮವಹಿಸಬೇಕು. ನರೇಗಾ ಕ್ರಿಯಾ ಯೋಜನೆಯನ್ನು ನಿಗದಿತ ಅವಧಿಯೊಳಗೆ ಸಲ್ಲಿಸಬೇಕು. ಗ್ರಾ.ಪಂನಿಂದ ಸಲ್ಲಿಸಿದ ಕ್ರಿಯಾ ಯೋಜನೆಗಳನ್ನು ಉಪಕಾರ್ಯದರ್ಶಿ(ಅಭಿವೃದ್ಧಿ) ತಂಡವು ಪರಿಶೀಲಿಸಿ ಜ.19ರೊಳಗೆ ಅಂತಿಮ ವರದಿ ಸಿದ್ದಪಡಿಸಬೇಕು. ಅಂತೆಯೇ ಆದ್ಯತಾವಾರು ಕಾಮಗಾರಿಗಳನ್ನು ತೆಗೆದುಕೊಳ್ಳಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಸಾಮಗ್ರಿ ಮೊತ್ತ ಪಾವತಿ ಸಂಬಂಧ ರಾಜ್ಯ ಕಚೇರಿಯಿಂದ ಬಿಡುಗಡೆಯಾಗಿರುವ ಸಂಪೂರ್ಣ ಅನುದಾನವನ್ನು ನಿಯಮಾನುಸಾರ ಪಾವತಿಸಬೇಕು. ಈ ಸಂಬಂಧ ಇರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಉಪಕಾರ್ಯದರ್ಶಿ(ಅಭಿವೃದ್ಧಿ) ತಂಡ ರಾಜ್ಯ ಕಚೇರಿ ಮತ್ತು ಖಜಾನೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು. ಹೆಚ್ಚುವರಿ ಕ್ರಿಯಾಯೋಜನೆ ಅನುಮೋದನೆ ಬಗ್ಗೆ ರಾಜ್ಯ ಕಚೇರಿಯೊಂದಿಗೆ ನಿರಂತರ ಅನುಸರಣೆ ಮಾಡುವಂತೆ ಸೂಚಿಸಿದರು.
ನರೇಗಾ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನ ಸಂದರ್ಭದಲ್ಲಿನ ಹಣ ದುರುಪಯೋಗ ಹಾಗೂ ಕರ್ತವ್ಯ ಲೋಪದಂತಹ ಪ್ರಕರಣಗಳನ್ನು ನಿಯಮಾನುಸಾರ ತೀರುವಳಿಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ತಾ.ಪಂ ನಲ್ಲಿ ಅಡಾಕ್ ಸಭೆ ನಡೆಸಿ ಕೈಗೊಂಡ ನಿರ್ಣಯಗಳನ್ನು ಒಂದು ವಾರದೊಳಗಾಗಿ ಜಿಲ್ಲಾ ಸಮಾಜಿಕ ಪರಿಶೋಧನಾ ತಂಡ ಅನುಮೋದಿಸಬೇಕು, ಇಲ್ಲವೇ ತಿರಸ್ಕರಿಸಬೇಕು. ಇದರಿಂದ ಯಾವುದೇ ವಿಳಂಬಕ್ಕೆ ಆಸ್ಪದವಿಲ್ಲದಂತೆ ಕಂಡಿಕೆಗಳನ್ನು ತೀರುವಳಿಗೊಳಿಸಲು ಸಹಕಾರಿಯಾಗುತ್ತದೆ ಎಂದರು.
ತೆರಿಗೆ ವಸೂಲಾತಿಗೆ ಸಂಬಂಧಿಸಿದಂತೆ ಶೇ.76ರಷ್ಟು ಪ್ರಗತಿ ಸಾಧಿಸಿದ್ದು, ಜ.20ರೊಳಗೆ ಉತ್ತಮ ಗುರಿ ತಲುಪಬೇಕು. ಎಲ್ಲ ತಾಲೂಕಿನಿಂದ ಪ್ರತೀ ಮಾಹೆ ಕನಿಷ್ಟ 5 ಲಕ್ಷ ರೂ ಗ್ರಂಥಾಲಯ ಕರವನ್ನು ನಿಯಮಾನುಸಾರ ಪಾವತಿಸುವಂತೆ ಹಾಗೂ ಬಾಕಿ ಉಳಿಸಿಕೊಂಡಿರುವ ಬಿಕ್ಷುಕರ ಕರವನ್ನು ಸರ್ಕಾರದ ನಿರ್ದೇಶನದಂತೆ ಪಾವತಿಸಲು ಸೂಚಿಸಿದ ಸಿಇಒ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪೂರ್ಣಗೊಂಡಿರುವ ಬೂದು ನೀರು ನಿರ್ವಹಣೆ ಕಾಮಗಾರಿಗೆ ಅನುದಾನ ಬಿಡುಗಡೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಗ್ರಾ.ಪಂ ಮಟ್ಟದ ಸಂಜೀವಿನಿ ಒಕ್ಕೂಟಗಳಿಗೆ ಸರ್ಕಾರದಿಂದ ವಿವಿಧ ಸುತ್ತುನಿಧಿ ಮತ್ತು ಅನುದಾನಗಳು ಬಿಡುಗಡೆಯಾಗಿದೆ. ಅನುದಾನ ಬಿಡುಗಡೆಯಾದ ಉದ್ದೇಶಕ್ಕೆ ಬಳಕೆಯಾಗಿದೆಯೇ ಎಂಬ ಬಗ್ಗೆ ಲೆಕ್ಕ ಪರಿಶೋಧನೆ ನಡೆಸಿ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಿ ಜಿ.ಪಂ.ಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಡಾ.ಶಿವಲಿಂಗಯ್ಯ, ಉಪ ಕಾರ್ಯದರ್ಶಿ(ಅಭಿವೃದ್ಧಿ) ಲಕ್ಷ್ಮೀ, ಯೋಜನಾ ನಿರ್ದೇಶಕಿ ರೂಪಶ್ರೀ, ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ) ಚಂದ್ರು, ಸಹಾಯಕ ಕಾರ್ಯದರ್ಶಿ(ಆಡಳಿತ) ರವೀಂದ್ರ, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ, ಇಒಗಳಾದ ಸುಷ್ಮಾ, ರಾಮಲಿಂಗಯ್ಯ, ಶ್ರೀನಿವಾಸ್, ಲೋಕೇಶ್‌ಮೂರ್ತಿ, ಸತೀಶ್, ವೀಣಾ, ವೇಣು ಇದ್ದರು.