ಕಿಕ್ಕೇರಿ ಹೋಬಳಿಯ ಸಾಸಲು ಕ್ಷೇತ್ರದ ಮುಜರಾಯಿ ಇಲಾಖೆ ದೇಗುಲ ಅಭಿವೃದ್ಧಿ, ಸಮಸ್ಯೆಗಳ ಕುರಿತು ಮಂಗಳವಾರ ಶಾಸಕ ಎಚ್.ಟಿ. ಮಂಜು ವೀಕ್ಷಣೆ ಮಾಡಿದರು. ಶ್ರೀನಿವಾಸ್, ಅಶೋಕ್, ವೀಣಾ, ನರೇಂದ್ರ, ವಿಜಯ್, ಗ್ರಾಮಸ್ಥರು ಇದ್ದರು.  
ಮಂಡ್ಯ

ಸಾಸಲು ದೇಗುಲ ಅಭಿವೃದ್ಧಿಗೆ ನೂರೆಂಟು ವಿಘ್ನ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಟಿ.ಮಂಜುಗೆ ಗ್ರಾಮಸ್ಥರ ದೂರು
ಕಿಕ್ಕೇರಿ :ಸಾಸಲು ಕ್ಷೇತ್ರಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಅಸಂಖ್ಯಾತ ಭಕ್ತರು ದೇವರ ದರ್ಶನಕ್ಕೆ ಬರುವುದರಿಂದ ಮುಜರಾಯಿ ಇಲಾಖೆಗೆ ಲಕ್ಷಾಂತರ ರೂ.ಗಳ ವಾರ್ಷಿಕ ವರಮಾನವಿದೆ. ಆದರೆ ಭಕ್ತರಿಗೆ, ದೇಗುಲ ಅಭಿವೃದ್ಧಿಗೆ ಅಧಿಕಾರಿಗಳು ಮೀನಮೇಷ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಶಾಸಕರಲ್ಲಿ ಅಲವತ್ತುಕೊಂಡರು.
ಶಾಸಕ ಎಚ್.ಟಿ.ಮಂಜು ದೇಗುಲ ಅಭಿವೃದ್ಧಿ, ಸಮಸ್ಯೆ ಕುರಿತು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟರು.
ಸೋಮೇಶ್ವರ, ಶಂಭುಲಿಂಗೇಶ್ವರ ಜೀರ್ಣೋದ್ಧಾರ ನೆಪದಲ್ಲಿ ಎರಡು ದೇಗುಲಗಳನ್ನು ಕೆಡವಲಾಗಿದೆ. ಗ್ರಾಮಸ್ಥರು ದಾನಿಗಳ ಸಹಕಾರದಲ್ಲಿ ಎರಡು ಬಾಲಾಲಯ ಗುಡಿ ನಿರ್ಮಿಸಿ ಎರಡು ದೇವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಭಕ್ತರು ದೇವರ ದರ್ಶನ ಪಡೆಯಲು ಕಷ್ಟವಾಗುತ್ತಿದೆ. ಮುಜರಾಯಿ ಇಲಾಖೆ ಅಧಿಕಾರಿಗಳು ಇಲಾಖೆಯೇ ಬಾಲಾಲಯ ನಿರ್ಮಿಸಿದೆ ಎಂದು ನಕಲಿ ಬಿಲ್ ಮೂಲಕ ಲಕ್ಷಾಂತರ ರೂ. ವಂಚಿಸಿದೆ. ಹೊಸದಾಗಿ ನಿರ್ಮಿಸುತ್ತಿರುವ ಜೋಡಿ ರಥಗಳ ಗುಣಮಟ್ಟ ಕಳಪೆಯಾಗಿದೆ. ರಥದ ಚಕ್ರ, ದೂರಿ ಮರ ಕಳಪೆಯಾಗಿದ್ದು, ರಥ ಎಳೆಯುವಾಗ ಅವಘಡ ಸಂಭವಿಸಿದರೆ ಪ್ರಾಣಕ್ಕೆ ಹೊಣೆ ಯಾರು. ದೇಗುಲದ ಹೆಸರಿನಲ್ಲಿ ಖಾತೆ ಮಾಡಿಕೊಡಿ, ದೇಗುಲದ ಹುಂಡಿಯಿಂದ ಸುಲಭವಾಗಿ ಹಣ ತೆಗೆಯಬಹುದಾಗಿದೆ. ಸುರಕ್ಷತೆ, ಭದ್ರತೆ ಇಲ್ಲ. ಭಕ್ತರಿಗೆ ತಂಗಲು ಸ್ಥಳವಿಲ್ಲ. ಬಟ್ಟೆ ಬದಲಿಸಿಕೊಳ್ಳಲು ಜಾಗವಿಲ್ಲ ಎಂದು ಗ್ರಾಮಸ್ಥರು ಸಮಸ್ಯೆಗಳನ್ನು ತೋಡಿಕೊಂಡರು.
ಎಲ್ಲವನ್ನು ಆಲಿಸಿದ ಶಾಸಕ ಎಚ್.ಟಿ. ಮಂಜು ಮಾತನಾಡಿ, ದೇಗುಲ ಅಭಿವೃದ್ಧಿಗೆ ಮೊದಲು ಇರುವ ತೊಡಕು ನಿವಾರಣೆ ಆಗಬೇಕಿದೆ. ದೇಗುಲ ಅಭಿವೃದ್ಧಿಗಾಗಿ ಸಮಿತಿ ರಚಿಸೋಣ. ಇಲ್ಲಿಗೆ ವಿಶೇಷ ಅಧಿಕಾರಿ ನೇಮಿಸಲು ತಿಳಿಸಲಾಗಿದೆ. ಎಲ್ಲ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಪರಿಹರಿಸಲಾಗುವುದು. ದೇಗುಲದ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರವಾಗಿದ್ದರೆ ತನಿಖೆ ಮಾಡಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೂಡಲೇ ತೆಗೆದುಕೊಳ್ಳಿ ಎಂದು ಸ್ಥಳದಲ್ಲಿದ್ದ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಸಿದರು.
ದೇಗುಲ ಅಭಿವೃದ್ಧಿಗೆ ಗ್ರಾಮಸ್ಥರು ಹಣ ವ್ಯಯಮಾಡಿದರೆ, ಇಲಾಖೆ ಸಿಬ್ಬಂದಿಗಳೇ ನಕಲಿ ಬಿಲ್ ತಯಾರಿಸಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಕಣ್ಣಿಗೆ ಕಾಣುತ್ತಿದೆ. ಮೊದಲು ಇವರನ್ನು ಅಮಾನತುಗೊಳಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಪಾಂಡವಪುರ ವಿಭಾಗದ ಉಪವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿ, ಭಕ್ತರ, ಗ್ರಾಮಸ್ಥರು ಮನವಿಗೆ ಸ್ಪಂದಿಸಲಾಗುವುದು. ವಾಸ್ತವ ಮಾಹಿತಿ ತಿಳಿಯಲಾಗಿದೆ. ಸೂಕ್ತ ತನಿಖೆ ಮಾಡಿ, ದೇಗುಲ ಅಭಿವೃದ್ಧಿಗೆ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರು.
ಮುಜರಾಯಿ ಅಧಿಕಾರಿ ಅಶೋಕ್, ಉಪ ತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ಡಿ.ಆರ್. ನರೇಂದ್ರ, ಗ್ರಾಮ ಆಡಳಿತಾಧಿಕಾರಿ ತಿಪ್ಪೇಶ್, ಐಕನಹಳ್ಳಿ ಗ್ರಾಪಂ ಪಿಡಿಒ ವಿಜಯ್, ಗ್ರಾಮ ಮುಖಂಡರು ಇದ್ದರು.