ಪಾಂಡವಪುರ ಪಟ್ಟಣದಲ್ಲಿನ ಸ್ಕ್ಯಾನಿಂಗ್ ಸೆಂಟರ್‌ಗೆ ಧಿಡೀರ್ ದಾಳಿ ಮಾಡಿದ ಅಧಿಕಾರಿಗಳ ತಂಡ ಸ್ಕ್ಯಾನಿಂಗ್ ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದರು. 
ಮಂಡ್ಯ

ಸ್ಕಾೃನಿಂಗ್ ಸೆಂಟರ್‌ಗೆ ಅಧಿಕಾರಿಗಳ ದಿಢೀರ್ ಭೇಟಿ

ಎಂ.ರವಿ

ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಡಿಎಚ್‌ಒ ಡಾ.ಸಿ.ಎ.ಅರವಿಂದ್ ನೇತೃತ್ವ

ಪಾಂಡವಪುರ: ಹೆಣ್ಣು ಭ್ರೂಣಹತ್ಯೆ ಪತ್ತೆ ಪ್ರಕರಣಗಳ ಸಂಬಂಧವಾಗಿ ಬುಧವಾರ ಪಟ್ಟಣದಲ್ಲಿರುವ ಹಲವು ಸ್ಕ್ಯಾನಿಂಗ್ ಸೆಂಟರ್ ಗಳಿಗೆ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಹಾಗೂ ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಇರುವ ತಹಸೀಲ್ದಾರ್ ಕಚೇರಿಯಲ್ಲಿ ಹೆಣ್ಣು ಭ್ರೂಣಹತ್ಯೆ ಹಾಗೂ ಬಾಲ್ಯ ವಿವಾಹ ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಸಭೆ ನಡೆಸಿದ ಅಧಿಕಾರಿಗಳು ಬಳಿಕ ಪಟ್ಟಣದಲ್ಲಿ ಇರುವ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಮೊದಲು ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಶಿಲ್ಪಶ್ರೀ ನಡೆಸುತ್ತಿರುವ ಶ್ರೀ ಸಾಯಿ ಸ್ಕ್ಯಾನಿಂಗ್ ಸೆಂಟರ್‌ಗೆ ಭೇಟಿಕೊಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಸ್ಕ್ಯಾನಿಂಗ್ ಸೆಂಟರ್‌ಗೆ ಭೇಟಿಕೊಟ್ಟ ಸಂದರ್ಭದಲ್ಲಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಇರಬೇಕಿದ್ದ ಹಲವು ಮೂಲಸೌಕರ್ಯ ಕೊರತೆ ಕಂಡುಬಂತು. ಬಳಿಕ ಕ್ಲಿನಿಕ್‌ನಲ್ಲಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿರುವ ಮಾಹಿತಿ ಪಟ್ಟಿಯನ್ನು ವೀಕ್ಷಿಸಿದರು. ಬಳಿಕ ಇಲ್ಲಿಯವರೆಗೆ ಗರ್ಭಿಣಿಯರಿಗೆ ಮಾಡಿರುವ ಸ್ಕ್ಯಾನಿಂಗ್ ವಿವರವನ್ನು ನೀಡುವಂತೆ ಸೂಚನೆ ನೀಡಿ ತೆರಳಿದರು. ನಂತರ ಬಾಬು ಆಸ್ಪತ್ರೆ ಹಾಗೂ ಇತಿಹಾಸ್ ಕ್ಲಿನಿಕ್‌ಗೆ ತೆರಳಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಸ್ಕ್ಯಾನಿಂಗ್ ಮಾಡಿರುವ ಮಾಹಿತಿ ನೀಡುವಂತೆ ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮಾತನಾಡಿ, ಹೆಣ್ಣು ಭ್ರೂಣಹತ್ಯೆ ಹಾಗೂ ಬಾಲ್ಯ ವಿವಾಹ ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಮೂರು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಜತೆಗೆ ಆಸ್ಪತ್ರೆ ವೈದ್ಯರಿಗೆ ಸ್ಕ್ಯಾನಿಂಗ್ ನಡೆಸಿರುವ ಮಾಹಿತಿ ನೋಡುವಂತೆ ಸೂಚಿಸಿದ್ದೇವೆ ಎಂದರು.
ಹೆಣ್ಣು ಭ್ರೂಣಹತ್ಯೆ ಕಾನೂನುಬಾಹಿರದ ಜತೆಗೆ ಮಹಾ ಅಪರಾಧ ಕೃತ್ಯವಾಗಿದೆ. ಹೆಣ್ಣು ಮಗು ಮನೆಯ ಕಣ್ಣು ಇದ್ದಂತೆ. ಅವರನ್ನು ರಕ್ಷಣೆ ಮಾಡಬೇಕಾಗಿರುವುದು ಎಲ್ಲರ ಜವಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ಹೆಣ್ಣು ಭ್ರೂಣಹತ್ಯೆ ಮಾಡದೆ ಹೆಣ್ಣು ಮಗುವನ್ನು ಸಾಕಬೇಕು. ಹೆಣ್ಣುಭ್ರೂಣ ಹತ್ಯೆ ತಡೆಗೆ ಹಾಗೂ ಬಾಲ್ಯ ವಿವಾಹ ತಡೆಗೆ ಸಾರ್ವಜನಿಕರ ಸಹಕಾರ ಅಗ್ಯವಾಗಿದೆ ಎಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಂದಕುಮಾರ್, ಸಿಡಿಪಿಒ ಪೂರ್ಣಿಮಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕೋಮಲಾ, ಸಬ್ ಇನ್‌ಸ್ಪೆಪೆಕ್ಟರ್ ಧರ್ಮಪಾಲ್ ಸೇರಿದಂತೆ ಹಲವರು ಹಾಜರಿದ್ದರು.