ಮಳವಳ್ಳಿಯ ಶಾಂತಿ ಕಾಲೇಜು ಮುಂಭಾಗ ಸಿದ್ಧಗೊಳ್ಳುತ್ತಿರುವ ವೇದಿಕೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ್, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲಿಸಿದರು.  
ಮಂಡ್ಯ

ಮಳವಳ್ಳಿಯ ವಿವಿಧೆಡೆ ಸ್ಥಳ ಪರಿಶೀಲಿಸಿದ ಅಧಿಕಾರಿಗಳು

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • 17ರಂದು ರಾಷ್ಟ್ರಪತಿ ಆಗಮಿಸುವ ಹಿನ್ನೆಲೆ
  • ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ
ಮಳವಳ್ಳಿ: ಪಟ್ಟಣದಲ್ಲಿ ಏಳು ದಿನಗಳ ಕಾಲ ನಡೆಯಲಿರುವ ಶಿವರಾತ್ರಿ ಶಿವಯೋಗಿಗಳ ಜಯಂತಿ ಮಹೋತ್ಸವ ಉದ್ಘಾಟನೆಗೆ ಡಿ.17ರಂದು ರಾಷ್ಟ್ರಪತಿ ಆಗಮಿಸುವ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಪಟ್ಟಣಕ್ಕೆ ಭೇಟಿ ನೀಡಿ ವಿವಿಧೆಡೆ ಸ್ಥಳ ಪರಿಶೀಲಿಸಿದರು.
ಪಟ್ಟಣದ ಮೈಸೂರು ಮುಖ್ಯರಸ್ತೆಯ ಶಾಂತಿ ಕಾಲೇಜು ಮುಂಭಾಗದ 33 ಎಕರೆ ಪ್ರದೇಶದಲ್ಲಿ ಸಿದ್ಧಗೊಳ್ಳುತ್ತಿರುವ ಮುಖ್ಯ ವೇದಿಕೆ ಹಾಗೂ ಪಟ್ಟಣದ ಮಾರೇಹಳ್ಳಿ ಬಳಿ ಸಿದ್ಧಪಡಿಸಿರುವ ಪ್ರತ್ಯೇಕ ಹೆಲಿಪ್ಯಾಡ್ ಸ್ಥಳಗಳನ್ನು ಪರಿಶೀಲಿಸಿದರು.
ಗ್ರೀನ್ ರೂಂ ನಿರ್ಮಾಣ, ರಾಷ್ಟ್ರಪತಿ ತೆರಳುವ ಮಾರ್ಗದಲ್ಲಿ ಎಲ್ಲೆಲ್ಲಿ ಸೂಕ್ತ ಬಂದೋಬಸ್ತ್ ಮಾಡುವುದು ಸೇರಿದಂತೆ ಶಿಷ್ಟಾಚಾರ ಪಾಲನೆ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಲಾಯಿತು. ನಂತರ ಪ್ರವಾಸಿ ಮಂದಿರಕ್ಕೆ ಆಗಮಿಸಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರಲ್ಲದೆ, ಜಯಂತಿ ಮಹೋತ್ಸವದಲ್ಲಿ ಆಡಳಿತ ವರ್ಗ ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತ ಚರ್ಚಿಸಿದರು.
ಸಭೆಯ ನಂತರ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ತುರ್ತು ಸೇವೆಗಳ ಸಿದ್ಧತೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಾಲೂಕು ಆರೋಗ್ಯ ಅಧಿಕಾರಿ ಡಾ.ವೀರಭದ್ರಪ್ಪ ಮತ್ತು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್ ಅವರಿಗೆ ಸಲಹೆ, ಸೂಚನೆ ನೀಡಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ. ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ, ಲೋಕೋಪಯೋಗಿ ಇಂಜಿನಿಯರ್ ಸೋಮಶೇಖರ್, ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಪ್ರೇಮ್ ಕುಮಾರ್, ಸಿಪಿಐ ಶ್ರೀಧರ್ ಸೇರಿದಂತೆ ಜಯಂತಿ ಮಹೋತ್ಸವದ ಆಚರಣಾ ಸಮಿತಿಯ ಪದಾಧಿಕಾರಿಗಳಿದ್ದರು.