ಹೊನ್ನಾಯಕನಹಳ್ಳಿ ಗ್ರಾಮದ ಬಸವನಗೋರಿ ಬಳಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಮದ್ದೂರು ತಾಲೂಕಿನ ಹೆಬ್ಬಕವಾಡಿ ಮುಖ್ಯನಾಲೆ, ವಿತರಣಾ ನಾಲೆಗಳು ಹಾಗೂ ಪಿಕಪ್ ನಾಲೆಗಳ ಆಧುನಿಕರಣ ಕಾಮಗಾರಿಗೆ ಶಾಸಕ ಕದಲೂರು ಉದಯ್ ಭೂಮಿ ಪೂಜೆ ನೆರವೇರಿಸಿದರು. ಸ್ಟಾರ್ ಚಂದ್ರು, ಬಿ.ಬಸವರಾಜು, ಅಣ್ಣೂರು ರಾಜೀವ್, ಹರೀಶ್ ಬಾಬು ಇತರರು ಇದ್ದರು. 
ಮಂಡ್ಯ

ರೈತರ ನೀರಿನ ಬವಣೆ ನೀಗಲು ನಾಲಾ ಆಧುನಿಕರಣ

ಕೆ.ಎಂ.ದೊಡ್ಡಿ: ಕೊನೇ ಭಾಗದ ರೈತರ ಬೆಳೆಗಳಿಗೆ ನೀರಿನ ಬವಣೆ ನೀಗಲು ನಾಲಾ ಆಧುನಿಕರಣ ಕಾಮಗಾರಿ ಕೈಗೆತ್ತಿಕೊಂಡು ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನು ನಡೆಸುತ್ತಾ ಬಂದಿದ್ದೇನೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಹೊನ್ನಾಯಕನಹಳ್ಳಿ ಗ್ರಾಮದ ಬಸವನಗೋರಿ ಬಳಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಮದ್ದೂರು ತಾಲೂಕಿನ ಹೆಬ್ಬಕವಾಡಿ ಮುಖ್ಯನಾಲೆ, ವಿತರಣಾ ನಾಲೆಗಳು ಹಾಗೂ ಪಿಕಪ್ ನಾಲೆಗಳ ಆಧುನಿಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪ್ರತಿ ಬೆಳೆಗೂ ಕೊನೇ ಭಾಗದ ರೈತರು ನೀರಿಗಾಗಿ ಪರಿತಪಿಸುತ್ತಾ ಹೋರಾಟ ಮಾಡುತ್ತಾ ಬಂದಿದ್ದರೂ ದಶಕಗಳಿಂದ ಕೊನೇ ಭಾಗದ ರೈತರಿಗೆ ನೀರು ಗಗನ ಕುಸುಮವಾಗಿತ್ತು. ಅದನ್ನು ಅರಿತು ಮುಖ್ಯನಾಲೆ ಸೇರಿದಂತೆ ವಿತರಣಾ ನಾಲಾ ಆಧುನಿಕರಣಗೊಳಿಸಿ ರೈತರ ಬೆಳೆಗಳಿಗೆ ಸರಗವಾಗಿ ನೀರು ಹರಿಸಲು ಕ್ರಮ ವಹಿಸಿದ್ದೇನೆ ಎಂದು ತಿಳಿಸಿದರು.
ನಾಲೆಗಳಿಗೆ ಹರಿಸಿದಾಗ ನೀರು ಪೋಲಾಗಿ ಕೊನೆಯ ಭಾಗಕ್ಕೆ ಸಿಗದೇ ರೈತರು ಕಂಗಾಲಾಗಿದ್ದು, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ನಾಲೆಗಳ ಆಧುನಿಕರಣ ವಿತರಣಾ ನಾಲೆಗಳು ಹಾಗೂ ಪಿಕಪ್ ನಾಲೆಗಳ ಅಭಿವೃದ್ಧಿಪಡಿಸಿ ಮುಂದೆ ತಾಲೂಕಿನ ರೈತರ ನೀರಾವರಿ ಸಮಸ್ಯೆಗಳು ಎದುರಾಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಮುಟ್ಟನಹಳ್ಳಿ ಬಳಿ ಇರುವ ಸೂಳೆಕೆರೆಯನ್ನು 300 ಎಕರೆ ಜಾಗ ಒತ್ತುವರಿ ಮಾಡಿ ಕೊಂಡಿದ್ದು, ಅದನ್ನು ತೆರವು ಗೊಳಿಸಲಾಗುತ್ತಿದೆ. ಜತೆಗೆ ಕೆರೆ ಹೂಳೆತ್ತುವ ಕಾರ್ಯ ಕೂಡ ಆರಂಭವಾಗಿದೆ. ದಿನ ನಿತ್ಯ ಇಟಾಚಿ, ಜೆಸಿಬಿಗಳ ಮೂಲಕ ಹೂಳು ತೆಗೆಸಿ ನೂರಾರು ಲಾರಿಗಳ ಮೂಲಕ ಹೂಳೆ ಮಣ್ಣನ್ನು ಸಾಗಿಸಿ ಕೆರೆಗೆ ಹೆಚ್ಚುವರಿ ನೀರು ಸಂಗ್ರಹಣೆಯಾಗಿ ಅಭಿವೃದ್ಧಿಪಡಿಸಿ ರೈತರಿಗೆ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಸಿ ಎರಡು ಬೆಳೆಗಳಿಗೆ ನೀರು ದೊರಕುವಂತೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮದ್ದೂರು ಕ್ಷೇತ್ರದ ರೈತರ ಸಮಗ್ರ ಕಲ್ಯಾಣಕ್ಕಾಗಿ ಹಾಗೂ ನೀರಾವರಿ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರದಿಂದ ಕಾವೇರಿ ನೀರಾವರಿ ನಿಗಮಕ್ಕೆ 600 ಕೋಟಿ ರೂ. ಗೂ ಹೆಚ್ಚಿನ ಅನುದಾನ ತಂದಿದ್ದು, ಹೆಬ್ಬಕವಾಡಿ ನಾಲೆಗಳ ಅಭಿವೃದ್ಧಿಯಿಂದ ತಾಲೂಕಿನ ಸಬ್ಬನಹಳ್ಳಿಯಿಂದ ಎಸ್.ಐ ಹೊನ್ನಲಗೆರೆ ಗ್ರಾಮದ ಸುಮಾರು ಸಾವಿರಾರು ಎಕರೆ ಭೂಪ್ರದೇಶಗಳಿಗೆ ನೀರಿನ ಅನುಕೂಲ ದೊರೆಯಲಿದೆ ಎಂದರು.
ಕ್ಷೇತ್ರದ ಹಲವು ಗ್ರಾಮಗಳಲ್ಲಿ ಗ್ರಾಮ ಪರಿಮಿತಿ ರಸ್ತೆಗಳ ನಿರ್ಮಾಣಕ್ಕೆ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆಗಳನ್ನು ಅಭಿವೃದ್ಧಿಗೆ ಶೀಘ್ರದಲ್ಲಿ ಚಾಲನೆ ದೊರೆಯಲಿದೆ. ಉತ್ತಮ ರಸ್ತೆ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.
ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶೇಷ ಕಾಳಜಿ ವಹಿಸಿ ಮಂಡ್ಯ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದ್ದು, ಅದರಲ್ಲಿ ವಿಶೇಷವಾಗಿ ಮದ್ದೂರು ತಾಲೂಕಿಗೆ ನೀಡಿದ್ದಾರೆ ಎಂದು ಶ್ಲಾಸಿದರು.
ಸ್ಟಾರ್ ಚಂದ್ರು ಗೆಲ್ಲಿಸಬೇಕಿತ್ತು: ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಉದಾರವಾದ ಮನುಸುಳ್ಳ ಸಮಾಜ ಸೇವಕ ಸ್ಟಾರ್ ಚಂದ್ರು ಅವರನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದರೆ ಮಂಡ್ಯ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗುತಿತ್ತು. ಜನಸಾಮಾನ್ಯರಿಗೆ ಸಿಗದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಿ? ಗೆದ್ದಂತವರು ಎಷ್ಟು ಜನರ ಸಮಸ್ಯೆಗಳಿಗೆ ಸ್ಪಂದಿದ್ದಾರೆ?ಎಂದು ಕೇಮದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೆಸರು ಹೇಳದೆ ಕಿಡಿಕಾರಿದರು
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸ್ಟಾರ್ ಚಂದ್ರು, ಮದ್ದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಬಸವರಾಜು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಭಾರತೀನಗರ ಯುವ ಬ್ಲಾಕ್ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಭೂನ್ಯಾಯ ಮಂಡಳಿಯ ಸದಸ್ಯ ಮಹೇಂದ್ರ, ಕೆಡಿಪಿ ಸಮಿತಿಯ ಸದಸ್ಯರಾದ ಟಿ.ಬಿ.ಹಳ್ಳಿ ಅಭಿಷೇಕ, ರಾಜಣ್ಣ, ಕಾವೇರಿ ನೀರಾವರಿ ನಿಗಮದ ಎಇಇ ಪ್ರಶಾಂತ್, ಎಇ ಅವಿನಾಶ್ ಸೇರಿದಂತೆ ಹಲವರು ಇದ್ದರು.