ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಚೌಡಸಮುದ್ರ ಗ್ರಾಮದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ವಿಶೇಷ ರಾಷ್ಟ್ರೀಯ ಯೋಜನಾ ಶಿಬಿರವನ್ನು ಶಾಸಕ ಎಚ್.ಟಿ.ಮಂಜು ಉದ್ಘಾಟಿಸಿದರು. ವಿ.ವಿ.ಜಗದೀಶ್, ಡಾ.ಜಯಕೀರ್ತಿ, ಬೋರೇಗೌಡ, ಕುಮಾರ, ಬಸವಲಿಂಗಪ್ಪ ಇದ್ದರು. 
ಮಂಡ್ಯ

ಶಿಕ್ಷಣದ ಜತೆಗೆ ಜೀವನಾನುಭವ ನೀಡುವ ಎನ್‌ಎಸ್‌ಎಸ್

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಟಿ. ಮಂಜು ಅಭಿಮತ
ಕೆ.ಆರ್.ಪೇಟೆ: ಸೇವೆಗಾಗಿ ಬಾಳು ಎಂಬ ತತ್ವದಡಿಯಲ್ಲಿ ರೂಪಿಸಲಾಗಿರುವ ರಾಷ್ಟ್ರೀಯ ಯೋಜನಾ ಶಿಬಿರವು ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದ ನೈಜ ಅನುಭವವನ್ನು ಒದಗಿಸುತ್ತದೆ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಚೌಡಸಮುದ್ರ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ವಿಶೇಷ ರಾಷ್ಟ್ರೀಯ ಯೋಜನಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ತರಗತಿ ಕೋಣೆಯೊಳಗೆ ಕುಳಿತು ಪಾಠ ಕೇಳುವುದೇ ಶಿಕ್ಷಣವಲ್ಲ, ಶಿಕ್ಷಣದ ಜತೆಗೆ ನಮ್ಮ ಜೀವನಕ್ಕೆ ಅಗತ್ಯವಾಗಿರುವ ಎಲ್ಲ ಅನುಭವಗಳನ್ನು ರಾಷ್ಟ್ರೀಯ ಯೋಜನಾ ಶಿಬಿರ ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ವ್ಯಾಸಂಗದ ಅವಧಿಯಲ್ಲಿಯೇ ಶ್ರಮದಾನ, ಸೇವೆಯನ್ನು ಮಾಡುವ ಮೂಲಕ ಸ್ಥಳೀಯ ಪರಿಸ್ಥಿತಿ ಅರಿತು ಅದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು ಈ ಶಿಬಿರದ ಉದ್ದೇಶವಾಗಿದೆ. ಚೌಡಸಮುದ್ರ ಹೈನುಗಾರಿಕೆಗೆ ಹೆಸರುವಾಸಿಯಾದ ಗ್ರಾಮವಾಗಿದ್ದು, ಇಲ್ಲಿನ ಜನರು ಹಾಗೂ ಕಸುಬುಗಳು ಅವರ ಜೀವನಶೈಲಿ, ಅವರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಸಮಸ್ಯೆಗಳನ್ನು ಅರಿತು ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕಿದೆ ಎಂದರು.
ಹಿಂದೆ ಪದವಿ ಪಡೆದವರನ್ನು ಜನರು ಬಹಳ ಗೌರವದಿಂದ ಕಾಣುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಸ್ವಂತಿಕೆ ಎನ್ನುವುದು ಇರಬೇಕು. ಸ್ವಂತಿಕೆ ಇದ್ದಾಗ ವಾಕ್ ಚಾತುರ್ಯ, ಧೈರ್ಯ, ಆತ್ಮಾಭಿಮಾನ ಬರುತ್ತದೆ. ಇದಕ್ಕೆ ಬಿಗ್‌ಬಾಸ್ ಗಿಲ್ಲಿನಟ ಉತ್ತಮ ಉದಾಹರಣೆ. ಗ್ರಾಮಸ್ಥರು ಸಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸಲಹೆ, ಮಾರ್ಗದರ್ಶನ ಸಹಕಾರ ನೀಡಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲಡಾ.ವಿ.ವಿ.ಜಗದೀಶ್, ಪ್ರಾದ್ಯಾಪಕ ಡಾ.ಜಯಕೀರ್ತಿ, ಬೋರೇಗೌಡ, ಬೀರವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ, ಅಕ್ಕಿಹೆಬ್ಬಾಳು ಹೋಬಳಿ ಜೆಡಿಎಸ್ ಅಧ್ಯಕ್ಷ ಬಸವಲಿಂಗಪ್ಪ ಹಾಜರಿದ್ದರು.