ಪಾಂಡವಪುರ ವಿಜಯ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಮೇಲುಕೋಟೆ ಕಲ್ಯಾಣಿಯಲ್ಲಿ ಸ್ವಚ್ಛಗೊಳಿಸಿದರು.
ಮೇಲುಕೋಟೆ: ಪಾಂಡವಪುರ ವಿಜಯ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ವೈರಮುಡಿ ಬ್ರಹ್ಮೋತ್ಸವದಲ್ಲಿ ಸ್ವಚ್ಛತೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾದರು.
ಶಿಬಿರಾಧಿಕಾರಿ ಪ್ರೊ.ಎನ್.ಕೆ.ವೆಂಕಟೇಗೌಡ ಮಾರ್ಗದರ್ಶನದಲ್ಲಿ ಮೇಲುಕೋಟೆಯಲ್ಲಿ ಏ.2ರವರೆಗೆ ವಾರ್ಷಿಕ ಶಿಬಿರ ಹಮ್ಮಿಕೊಂಡಿದ್ದು, ವೈರಮುಡಿ ಜಾತ್ರಾ ಮಹೋತ್ಸವದ ವೇಳೆ ಅನ್ನದಾನ ಭವನದಲ್ಲಿ ಭಕ್ತರಿಗೆ ವ್ಯವಸ್ಥಿತವಾಗಿ ಪ್ರಸಾದ ವಿತರಣೆ ಮಾಡಿದ್ದಾರೆ. ವೈರಮುಡಿ ರಥೋತ್ಸವ, ತೆಪ್ಪೋತ್ಸವದ ದಿನಗಳಂದು ಸಹಸ್ರಾರು ಭಕ್ತರಿಗೆ ಅನ್ನದಾನ ವಿತರಿಸಿದ್ದಾರೆ. ಬೆಳಗ್ಗೆ 11ಗಂಟೆಯಿಂದ ಸಂಜೆ 5ರವರೆಗೆ ಅನ್ನದಾನ ವಿತರಣೆಯಲ್ಲಿ ತೊಡಗಿಸಿಕೊಂಡು ಭಕ್ತರ ಸೇವೆ ಮಾಡಿದ್ದಾರೆ.
ಅಲ್ಲದೆ ಕಲ್ಯಾಣಿಯನ್ನು ಶಿಬಿರದ ವೇಳೆ ಸ್ವಚ್ಛಗೊಳಿಸುವ ಜತೆಗೆ, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದ್ದಾರೆ. ಕಲ್ಯಾಣಿಯ ಸುತ್ತ ಸೋಪಾನಗಳ ಮೇಲೆ ಭುವನೇಶ್ವರಿ ಮಂಟಪದ ಸುತ್ತಲೂ ಪ್ರತಿದಿನ ಸ್ವಚ್ಛತಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ 60 ಮಂದಿ ಶಿಬಿರಾರ್ಥಿಗಳ ತಂಡ, ಕಸವನ್ನು ಟ್ರಾೃಕ್ಟರ್ ಮೂಲಕ ಸಾಗಿಸಿದ್ದಾರೆ.
ಬುಧವಾರ ಬೆಳಗ್ಗೆ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಧ್ವಜಾರೋಹಣ ವೇಳೆ ಶಿಬಿರಾಧಿಕಾರಿ ಪ್ರೊ.ವೆಂಕಟೇಗೌಡ ಮಾತನಾಡಿ, ಕಳೆದ 11 ವರ್ಷಗಳಿಂದ ನಿರಂತರವಾಗಿ ಪಾಂಡವಪುರ ವಿಜಯ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ವೈರಮುಡಿ ವೇಳೆ ವಿವಿಧ ಸೇವೆ ಮಾಡುತ್ತಿದೆ. ಇದು ಭಕ್ತರಿಗೆ ಮಾಡಿದ ಸೇವೆಯಾಗಿದ್ದು, ನಮಗೆ ತೃಪ್ತಿ ನೀಡುತ್ತಿದೆ ಎಂದರು.
ಸಹ ಶಿಬಿರಾಧಿಕಾರಿಗಳಾದ ಎಂ.ಕೆ ರಾಜೇಶ್, ಎಚ್.ಎನ್.ಸುರೇಶ ಮತ್ತು ಮಹದೇವಯ್ಯ ಇದ್ದರು.