ಪಾಂಡವಪುರ ಕೆನ್ನಾಳು ಸಮೀಪದ ಸಂಪ್ರದಾಯ ಕನ್ವೆನ್ಷನ್ ಹಾಲ್‌ನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಕಾರ್ಯಾಗಾರವನ್ನು ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮೈಸೂರು ವಿಭಾಗದ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜೇಗೌಡ ಇತರರು ಇದ್ದರು. 
ಮಂಡ್ಯ

ಬಿಜೆಪಿ-ಜೆಡಿಎಸ್ ಮೈತ್ರಿಯ ಆತಂಕ ಬೇಡ

ಪಾಂಡವಪುರ: ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ಕಾರ್ಯಕರ್ತರು ಆತಂಕಪಡುವುದು ಬೇಡ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರು ಆಯ್ಕೆಯಾಗಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹೇಳಿದರು.
ತಾಲೂಕಿನ ಕೆನ್ನಾಳು ಸಮೀಪದ ಸಂಪ್ರದಾಯ ಕನ್ವೆನ್ಷನ್ ಹಾಲ್‌ನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮತಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಬಿಎಲ್ ಎ-2 ಕಾರ್ಯಾಗಾರದಲ್ಲಿ ಮಾತನಾಡಿದರು.
ರಾಜಕೀಯದಲ್ಲಿ ಯಾವುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಏನು ಬೇಕಾದರು ಬದಲಾವಣೆಯಾಗಬಹುದು. ಎನ್‌ಡಿಎ ಮೈತ್ರಿ ಬಗ್ಗೆ ಆತಂಕಬೇಡ. ಬೇರೆಯವರ ಮಾತುಗಳಿಗೆ ಕಿವಿಗೊಡುವುದು ಬೇಡ. ನಮ್ಮ ನಾಯಕರು ಕಾರ್ಯಕರ್ತರ ಸ್ವಾಭಿಮಾನ, ಭವಿಷ್ಯವನ್ನು ಅಡಮಾನ ಇಡುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರು ಚುನಾವಣೆ ಬಂದಾಗ ತನು, ಮನ, ಧನ ಎಲ್ಲವನ್ನು ಅರ್ಪಿಸಿ ಚುನಾವಣೆ ಮಾಡುತ್ತೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲೂ ಬಿಜೆಪಿ ಶಾಸಕರು ಆಯ್ಕೆಯಾಗಲಿದ್ದಾರೆ ಎಂದರು.
ರಾಜ್ಯದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಎಲ್ಲರೂ ಬಿಎಲ್‌ಒ-2ಗಳು ಇದರಲ್ಲಿ ತೊಡಗಿ ಪರಿಷ್ಕರಣೆ ಮಾಡಿಸಬೇಕು. ಜತೆಗೆ ಬಿಜೆಪಿಯಿಂದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಸಹ ನಡೆಸಲಾಗುತ್ತಿದೆ. ಇದರಲ್ಲೂ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು. ಏ.6ರಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಣೆ ಮಾಡಲಾಗಿತ್ತಿದ್ದು, ಅಂದು ಪಕ್ಷದ ಕಾರ್ಯಕರ್ತರು ಮನೆಯ ಮೇಲೆ ಪಕ್ಷದ ಬಾವುಟ ಆರಿಸುವ ಮೂಲಕ ಸಂಭ್ರಮಿಸಬೇಕು. ಏ.14ರಂದು ಅಂಬೇಡ್ಕರ್ ಜಯಂತಿ ಇರುವುದರಿಂದ ವಿಜೃಂಭಣೆಯಿಂದ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಇದರಲ್ಲೂ ಎಲ್ಲರೂ ಭಾಗವಹಿಸಬೇಕು ಎಂದರು.
ಮೈಸೂರು ವಿಭಾಗದ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜೇಗೌಡ ಮಾತನಾಡಿ, ಅರ್ಹ ಮತದಾರರ ಪಟ್ಟಿಯನ್ನು ಗುರುತಿಸುವ ಸಲುವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲಾಗುತ್ತಿದೆ. ಮತಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಹೊರಗಡೆ ಇರುವ ಮತದಾರರ ಪಟ್ಟಿಯನ್ನು ತಮ್ಮೂರಿನಲ್ಲಿಯೇ ಇರುವಂತೆ ನೋಡಿಕೊಳ್ಳಿ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶ ಸದೃಢವಾಗಿದೆ. ಸುತ್ತಮುತ್ತಲಿನ ದೇಶಗಳ ಸಮಸ್ಯೆ ನೋಡಿದರೆ ನಮ್ಮ ದೇಶ ಯಾವುದೇ ಸಮಸ್ಯೆಗಳಲ್ಲಿದೆ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎನ್ನುವುದು ತಿಳಿಯುತ್ತದೆ ಎಂದರು.
ಪ್ರತಿಯೊಬ್ಬರೂ ಸಂಘಟನೆಯ ಕಡೆಗೆ ಹೆಚ್ಚು ಗಮನಹರಿಸಬೇಕು. ನಾವು ಪಕ್ಷದ ಚಟುವಟಿಕೆ ನಡೆಸಿ ಪಕ್ಷ ಸಂಘಟಿಸಿದರೆ ಪಕ್ಷ ನನ್ನನ್ನು ಗುರುತಿಸಿ ಸ್ಥಾನಮಾನ ನೀಡುತ್ತದೆ. ಹಾಗಾಗಿ ಎಲ್ಲರೂ ಸಂಘಟನೆ ಬಲಪಡಿಸುವ ಕಡೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಮೈಸೂರು ವಿಭಾಗದ ಪ್ರಮುಖ್ ಸ್ವಾಮಿ ಮರಳಾಪುರ, ಮುಖಂಡ ಪಣಿಷ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಾ ನವೀನ್‌ಕುಮಾರ್, ತಾಲೂಕು ಅಧ್ಯಕ್ಷ ಧನಂಜಯ್, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್, ಮಹೇಶ್ ಇತರರು ಇದ್ದರು.