ವೈರಮುಡಿ ಕಿರೀಟ 
ಮಂಡ್ಯ

ಪಾರ್ಕಾವಣೆ ವೇಳೆ ವೈರಮುಡಿ ಕಿರೀಟ ಪರಿಶೀಲನೆ ಇಲ್ಲ

ಮೇಲುಕೋಟೆ : ಚೆಲುವನಾರಾಯಣಸ್ವಾಮಿಯ ವೈರಮುಡಿ ಕಿರೀಟವನ್ನು ಪಾರ್ಕಾವಣೆಯ ವೇಳೆ ಪರಿಶೀಲನೆ ಮಾಡುವ ಪರಂಪರೆಯಿಲ್ಲ ಎಂದು ದೇವಾಲಯದ ಪಾರುಪತ್ತೇಗಾರ್ ಹಾಗೂ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ತಿಳಿಸಿದ್ದಾರೆ.
ಮೇಲುಕೋಟೆಯಲ್ಲಿ ಮಾದ್ಯಮಗಳಿಗೆ ಮಾಹಿತಿ ನೀಡಿದ ಅವರು, ವೈರಮುಡಿ ಕಿರೀಟ ದರ್ಶನಕ್ಕೆ ಅವಕಾಶವಿದೆ, ಪ್ರತ್ಯೇಕವಾಗಿ ದರ್ಶನ ಮಾಡಬಹುದು ಎಂಬ ಭಾವನೆ ಬೆಳೆಸಿಕೊಂಡಿರುವ ಕಾರಣ ಪಾರ್ಕಾವಣೆಯ ವೇಳೆ ಗಣ್ಯಾತಿಗಣ್ಯರೇ ಮುಗಿಬಿದ್ದು ಭಾಗವಹಿಸುತ್ತಾರೆ. ಆದರೆ ಪಾರ್ಕಾವಣೆ ಎಂದರೆ ರಾಜಮುಡಿ ಮತ್ತು ಜತೆಗಿರುವ 16 ಬಗೆಯ ಆಭರಣಗಳನ್ನು ಜಿಲ್ಲಾಧಿಕಾರಿಗಳ ಸಮಕ್ಷಮ ಪರಿಶೀಲಿಸಿ ಸ್ಥಾನೀಕರು ಅರ್ಚಕ ಪರಿಚಾರಕರಿಗೆ ಹಸ್ತಾಂತರಿಸುವ ಸಾಮಾನ್ಯ ಪ್ರಕ್ರಿಯೆಯಾಗಿದೆ. 2024ರಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ರಾಜಮುಡಿ ಹಾಗೂ ಆಭರಣಗಳನ್ನು ಸಾಂಪ್ರದಾಯಿಕವಾಗಿ ಪರಿಶೀಲಿಸಲು ಅವಕಾಶ ನೀಡಿದ್ದು, ಯಾರೇ ಆಗಲಿ ಆಭರಣ ಪ್ರದರ್ಶಿಸುವುದನ್ನು ನಿಷೇಧಿಸಿ ಪಾರ್ಕಾವಣೆಗೆ ಸಂಬಂಧಪಡದ ಯಾರಿಗೂ ಆಭರಣಗಳನ್ನು ನೀಡಬಾರದು ಎಂದು ಆದೇಶಿಸಿದ್ದಾರೆ. ಇದೇ ಮಾದರಿಯ ಪ್ರಕ್ರಿಯೆ ವೈರಮುಡಿ ಜಾತ್ರೆ ಮುಗಿದು ರಾಜಮುಡಿ ತಿರುವಾಭರಣಪೆಟ್ಟಿಗೆ ಮರಳಿಸುವ ಪ್ರಕ್ರಿಯೆಯೂ ನಡೆಯುತ್ತದೆಯಾದರೂ ಅಂದು ಯಾವುದೇ ಒತ್ತಡವಿಲ್ಲದೆ ಸರಳಪ್ರಕ್ರಿಯೆ ನಡೆಯುತ್ತದೆ ಎಂದಿದ್ದಾರೆ. ಭಕ್ತರ ನಂಬಿಕೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ಬಂದ ವರ್ಷದಲ್ಲೇ ವೈರಮುಡಿ ಪಾರ್ಕಾವಣೆ ಮಾಡಬಾರದು ಎಂದು ಆದೇಶ ನೀಡಿದೆ ಎಂದು ತಿಳಿಸಿದ್ದಾರೆ.
ವೈರಮುಡಿಯನ್ನು ನೇರವಾಗಿ ಬೆಳಕಿನಲ್ಲಿ ನೋಡುವ ಮತ್ತು ಪರಿಶೀಲಿಸುವ ಅವಕಾಶವಿಲ್ಲ. ಚೆಲುವನಾರಾಯಣನಿಗೆ ತೆರೆಯೊಳಗೆ ಸಣ್ಣದೀಪದ ಬೆಳಕಿನಲ್ಲಿ ವೈರಮುಡಿ ಧರಿಸಲಾಗುತ್ತದೆ. ಮಂಗಳಾರತಿಯ ವೇಳೆ ಸಂಪೂರ್ಣ ವೈರಮುಡಿಯನ್ನು ಅರ್ಚಕರು ಸ್ಥಾನೀಕರೂ ಸಹ ದರ್ಶನ ಮಾಡುವ ಸಂಪ್ರದಾಯವಿದೆ. ಸಾಕ್ಷಾತ್ ಭಗವಂತನ ಕಿರೀಟ ಎಂಬ ನಂಬಿಕೆಯೊಂದಿಗೆ ಸಾಂಪ್ರದಾಯಿಕ ಪರಂಪರೆಯನ್ನು ಕಾಪಾಡಿಕೊಂಡು ಬರಲಾಗಿದೆ ಎಂದಿದ್ದಾರೆ.
ನಾಣ್ಯ, ಹೂ ಎಸೆಯಬಾರದು
ವೈರಮುಡಿಯಂದು ಅತ್ಯಮೂಲ್ಯ ಆಭರಣಗಳಿಂದ ಚೆಲುವನಾರಾಯಣನನ್ನು ಅಲಂಕರಿಸಲಾಗುತ್ತದೆ. ಕೆಲವು ಭಕ್ತರು ಉತ್ಸವದ ಮೇಲೆ ನಾಣ್ಯ ಎಸೆಯುವ ಕಾರಣ ಪುರಾತನ ಆಭರಣಗಳಿಗೆ ಧಕ್ಕೆಯಾಗುತ್ತದೆ. ಈ ಹಿಂದೆಯೇ ಜಿಲ್ಲಾಧಿಕಾರಿಗಳು ನಾಣ್ಯ ಎಸೆಯುವುದನ್ನು ನಿಷೇಧಿಸಿದ್ದಾರೆ. ಈ ಕಾರಣ ಭಕ್ತರು ಉತ್ಸವದ ಮೇಲೆ ನಾಣ್ಯ ಎಸೆಯಬಾರದು ಎಂದಿರುವ ಸ್ಥಾನಾಚಾರ್ಯರು, ವೈರಮುಡಿ ಉತ್ಸವದ ಮೇಲೆ ಹೂವುಗಳನ್ನು ಎಸೆಯಬಾರದು. ಹೂ ಎಸೆಯುವುದರಿಂದ ಸ್ವಾಮಿಯ ಅಲಂಕಾರ ಮರೆಯಾಗಿ ಭಕ್ತರಿಗೆ ಸ್ವಾಮಿಯ ಸಂಪೂರ್ಣ ದರ್ಶನ ಲಭ್ಯವಾಗುವುದಿಲ್ಲ. ಈ ಕಾರಣದಿಂದ ಭಕ್ತರು ವೈರಮುಡಿ ಉತ್ಸವದ ಮೇಲೆ ನಾಣ್ಯ ಮತ್ತು ಹೂಗಳನ್ನು ಎಸೆಯಬಾರದು. ಈ ಬಗ್ಗೆ ಉತ್ಸವಕ್ಕೂ ಮುನ್ನ ಮೈಕ್‌ನಲ್ಲಿ ಹಾಗೂ ಉತ್ಸವದ ವೇಳೆ ಪೊಲೀಸರೂ ಮೈಕ್ ಮೂಲಕ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ.