ಪಾಂಡವಪುರದ ಲೋಕೋಪಯೋಗಿ ಕಚೇರಿಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಪುರಸಭೆ ಮಾಜಿ ಸದಸ್ಯರುಗಳಾದ ಆರ್.ಸೋಮಶೇಖರ್, ಚಂದ್ರು, ಶಿವಕುಮಾರ್, ಶೋಭಾ ಕುಮಾರ್ ಇತರರು ಇದ್ದರು. 
ಮಂಡ್ಯ

ಉದ್ದೇಶಿತ ಕಾಮಗಾರಿ ಹೊರತುಪಡಿಸಿ ಬೇರೆಡೆಗೆ ಅನುದಾನ ವಿನಿಯೋಗ ಬೇಡ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ
  • ಎಇ ಚಿದಾನಂದ
ಪಾಂಡವಪುರ: ಈ ಹಿಂದಿನ ಸರ್ಕಾರ ನೀಡಿದ್ದ ಅನುದಾನವನ್ನು ಉದ್ದೇಶಿತ ಕಾಮಗಾರಿಗಳಿಗೆ ಹೊರತುಪಡಿಸಿ ಬೇರೆ ಕಾಮಗಾರಿಗಳಿಗೆ ವಿನಿಯೋಗಿಸಬಾರದು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಲೋಕೋಪಯೋಗಿ ಕಚೇರಿ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಜಮಾಹಿಸಿದ ಕಾರ್ಯಕರ್ತರು, ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಐದು ದೀಪ ವೃತ್ತದಿಂದ ಹಾರೋಹಳ್ಳಿವರೆಗೂ ರಸ್ತೆ ಮಧ್ಯೆ ನಿರ್ಮಿಸಲಾಗಿರುವ ರಸ್ತೆ ವಿಭಜಕಗಳ ಮಧ್ಯೆ ವಿದ್ಯುತ್ ಬೀದಿದೀಪ ಅಳವಡಿಕೆಗಾಗಿ ಈ ಹಿಂದಿನ ಸರ್ಕಾರದಲ್ಲಿ 2 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಆದರೆ ರಸ್ತೆ ಕಾಮಗಾರಿ ಮುಗಿದು ಹಲವು ವರ್ಷ ಕಳೆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಿದ್ಯುತ್ ದೀಪ ಅಳವಡಿಕೆಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಅನನೂಕೂಲವಾಗಿದೆ. ಜತೆಗೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ವಿದ್ಯುತ್ ದೀಪ ಅಳವಡಿಕೆಗೆ ಮಂಜೂರಾಗಿರುವ ಅನುದಾನವನ್ನು ಇತರ ಕಾಮಗಾರಿಗೆ ವರ್ಗಾಹಿಸುವ ಹುನ್ನಾರ ನಡೆಯುತ್ತಿದ್ದು, ಒಂದು ವೇಳೆ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿದರೆ ಹಾಗೂ ಮಂಜೂರಾಗಿರುವ ಅನುದಾನದಲ್ಲಿ ಹದಿನೈದು ದಿನಗಳ ಅವಧಿಯಲ್ಲಿ ವಿದ್ಯುತ್ ದೀಪ ಅಳವಡಿಕೆಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ತಾಲೂಕಿನ ಸಮಗ್ರ ಅಭಿವೃದ್ಧಿಪಡಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ರಸ್ತೆಗಳು ಗುಂಡಿಬಿದ್ದಿವೆ. ಶಂಭೂನಹಳ್ಳಿ ಗ್ರಾಮದ ಬಳಿ ರಸ್ತೆ ನಡುವಿನ ಸೇತುವೆ ಕುಸಿದು ನಾಲ್ಕು ತಿಂಗಳು ಕಳೆದಿದೆ. ಸೇತುವೆ ನಿರ್ಮಾಣ ಕಾರ್ಯ ಈವರೆಗೂ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.
ಪ್ರತಿ ಮನೆಗೂ ಶುದ್ಧ ಕುಡಿವ ನೀರು ಒದಗಿಸುವ ಅಮೃತ್ ಯೋಜನೆಯ ಪೈಪ್‌ಲೈನ್ ಅಳವಡಿಕೆಗಾಗಿ ಪಟ್ಟಣದ ಪ್ರಮುಖ ರಸ್ತೆಗಳನ್ನು ಅಗೆಯಲಾಗಿದೆ. ಆದರೆ ಈ ಗುಂಡಿಗಳನ್ನು ಕನಿಷ್ಠ ಮುಚ್ಚುವ ಕೆಲಸ ಆಗಿಲ್ಲ. ಇದರಿಂದ ಅವಾಂತರ ಸೃಷ್ಠಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿಸಬೇಕು. ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಅಪಘಾತ ವಲಯಗಳನ್ನು ಗುರುತಿಸಿ ನಾಮಫಲಕ ಅಳವಡಿಸಿಬೇಕು. ಪಟ್ಟಣದ ಇಂಡಿಯನ್ ಆಯಿಲ್ ಬಂಕ್ ಬಳಿ ರಸ್ತೆಯಲ್ಲಿ ಬಳಿ ಅಪಘಾತಗಳು ಸಂಖ್ಯೆ ಹೆಚ್ಚುತ್ತಿರುವುದರಿಂದ ಪೊಲೀಸ್ ಇಲಾಖೆ ನೆರವಿನೊಂದಿಗೆ ಬ್ಯಾರಿಕೇಡ್ ಇಲ್ಲವೇ ರಸ್ತೆ ಡುಬ್ಬಗಳನ್ನು ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಎಇ ಚಿದಾನಂದ ಅವರೊಂದಿಗೆ ಪ್ರತಿಭಟನಾಕಾರರು ಚರ್ಚಿಸಿದರು. ಬಳಿಕ ಮಾತನಾಡಿದ ಎಇ ಚಿದಾನಂದ, ಪಟ್ಟಣದಿಂದ ಹಾರೋಹಳ್ಳಿವರೆಗಿನ ಬೀದಿದೀಪ ಅಳವಡಿಕೆ ಕಾಮಗಾರಿ ಕೆಲವು ತಾಂತ್ರಿಕ ಕಾರಣದಿಂದ ತಡವಾಗಿದೆ. ಶೀಘ್ರ ಬೀದಿದೀಪ ಅಳವಡಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ, ಇನ್ನುಳಿದಂತೆ ಮೇಲಧಿಕಾರಿಗಳ ಗಮನ ಸೆಳೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯಗೊಂಡಿತು.
ಪ್ರತಿಭಟನೆಯಲ್ಲಿ ಪುರಸಭೆ ಮಾಜಿ ಸದಸ್ಯರಾದ ಆರ್. ಸೋಮಶೇಖರ್, ಶೋಭಾ ಕುಮಾರ್, ಚಂದ್ರು, ಶಿವಕುಮಾರ್, ಜೆಡಿಎಸ್ ಮುಖಂಡ ಎಚ್.ಸಿ.ಕೃಷ್ಣೇಗೌಡ(ಪಟೇಲ) ಟಿಎಪಿಸಿಎಂಎಸ್ ನಿರ್ದೇಶಕ ಆದರ್ಶ, ಮಾಜಿ ಅಧ್ಯಕ್ಷ ಹಾರೋಹಳ್ಳಿ ಸತೀಶ್, ಮುಖಂಡರಾದ ಸಗಾಯಂ, ಚಿಕ್ಕಾಡೆ ಚೇತನ್, ಹಾರೋಹಳ್ಳಿ ಉಮೇಶ್, ಸೋಮಣ್ಣ, ಜಯರಾಮು, ಬೊಮ್ಮರಾಜು, ಕುಮರೇಶನ್, ಆರ‌್ಮುಗಂ, ಶಶಿಕಲಾ, ಸುನಂದಮ್ಮ, ಚೈತ್ರಾ, ಮಂಗಳಾ, ರಾಜಮ್ಮ, ಸುಧಾ ಐಶ್ವರ್ಯಾ ಇತರರು ಇದ್ದರು.