ಮಂಡ್ಯ ತಾಲೂಕು ವಿ.ಸಿ ಫಾರ್ಮ್‌ನಲ್ಲಿರುವ ಕೃಷಿ ವಿಶ್ವವಿದ್ಯಾನಿಲಯದ ನೂತನ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಅವರಿಗೆ ಡಾ.ಕೆ.ಎಂ.ಹರಿಣಿಕುಮಾರ್ ಅಧಿಕಾರ ಹಸ್ತಾಂತರಿಸಿದರು. 
ಮಂಡ್ಯ

ಕೃಷಿ ವಿವಿಗೆ ಕೆ.ಸಿ.ನಾರಾಯಣಸ್ವಾಮಿ ನೂತನ ಕುಲಪತಿ: ಅಧಿಕಾರ ಹಸ್ತಾಂತರಿಸಿದ ವಿಶೇಷಾಧಿಕಾರಿ ಹರಿಣಿಕುಮಾರ್

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ
  • ಮೊದಲ ಕುಲಪತಿ ನೇಮಿಸಿದ ರಾಜ್ಯಸರ್ಕಾರ
  • ಜಿಕೆವಿಕೆ ಕುಲಸಚಿವರಾಗಿ ನಿರ್ವಹಿಸುತ್ತಿದ್ದ ಕೆ.ಸಿ.ನಾರಾಯಣಸ್ವಾಮಿ
ಮಂಡ್ಯ: ತಾಲೂಕಿನ ವಿ.ಸಿ ಫಾರ್ಮ್‌ನಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಮೊದಲ ಕುಲಪತಿಯಾಗಿ ಡಾ.ಕೆ.ಸಿ.ನಾರಾಯಣಸ್ವಾಮಿ ನೇಮಕವಾಗಿದ್ದಾರೆ. ಅದರಂತೆ ವಿವಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಬೆಂಗಳೂರು ಜಿಕೆವಿಕೆ ಕುಲಸಚಿವರಾಗಿ ನಿರ್ವಹಿಸುತ್ತಿದ್ದ ಕೋಲಾರ ಮೂಲದ ಡಾ.ಕೆ.ಸಿ.ನಾರಾಯಣಸ್ವಾಮಿ ಅವರನ್ನು ಮಂಡ್ಯ ಕೃಷಿ ವಿವಿಗೆ ಕುಲಪತಿಯಾಗಿ ನೇಮಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಈವರೆಗೆ ವಿಶೇಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಕೆ.ಎಂ.ಹರಿಣಿಕುಮಾರ್ ಅಧಿಕಾರ ಹಸ್ತಾಂತರ ಮಾಡಿದರು. ಕೃಷಿ, ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಡಾ.ಕೆ.ಸಿ.ನಾರಾಯಣಸ್ವಾಮಿ ಅವರು ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಿಯ ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ಸಿಬ್ಬಂದಿ ವರ್ಗ ಇಬ್ಬರನ್ನು ಅಭಿನಂದಿಸಿದರು. ನೂತನ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಮಾತನಾಡಿ, ಮಂಡ್ಯ ಕೃಷಿ ವಿವಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜತೆಗೆ ರೈತ ಕೇಂದ್ರಿತ ಸಂಶೋಧನೆ, ಗುಣಮಟ್ಟದ ಶಿಕ್ಷಣ ಮತ್ತು ಪರಿಣಾಮಕಾರಿ ವಿಸ್ತರಣಾ ಚಟುವಟಿಕೆಗಳಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.

ಗಮನಸೆಳೆದಿದ್ದ ಹರಿಣಿಕುಮಾರ್
ಮಂಡ್ಯ ಕೃಷಿ ವಿವಿಯ ವಿಶೇಷಾಧಿಕಾರಿಯಾಗಿ ನೇಮಕಗೊಂಡಿದ್ದ ಡಾ.ಕೆ.ಎಂ.ಹರಿಣಿಕುಮಾರ್ ಅವರು ತಮ್ಮ ಅವಧಿಯಲ್ಲಿ ಕ್ರಿಯಾಶೀಲ ಚಟುವಟಿಕೆ ಮೂಲಕ ಗಮನ ಸೆಳೆದಿದ್ದರು. ಆಡಳಿತಾತ್ಮಕ ವ್ಯವಸ್ಥೆ, ಶೈಕ್ಷಣಿಕ ಚಟುವಟಿಕೆ, ಸಂಶೋಧನೆ ಹಾಗೂ ವಿಸ್ತರಣಾ ಕಾರ್ಯಗಳಿಗೆ ಸ್ಪಷ್ಟ ದಿಕ್ಕು ನೀಡಿದರು. ಅವರ ದೂರದೃಷ್ಟಿ, ಕಾರ್ಯಕ್ಷಮತೆ ಮತ್ತು ಸಮರ್ಪಣೆಯಿಂದ ವಿಶ್ವವಿದ್ಯಾಲಯವು ಸುಸಂಘಟಿತವಾಗಿ ರೂಪುಗೊಳ್ಳಲು ಸಾಧ್ಯವಾಗಿದೆ. ಮುಖ್ಯವಾಗಿ ವಿವಿ ಪ್ರಾರಂಭದ ಬಳಿಕ ನಡೆದ ಮೊದಲ ರಾಜ್ಯಮಟ್ಟದ ಕೃಷಿ ಮೇಳವನ್ನು ಅಭೂತಪೂರ್ವವಾಗಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಮೂರು ದಿನದ ಕೃಷಿಮೇಳಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಮೂಲಕ ಹೊಸ ದಾಖಲೆ ಬರೆದಿದೆ.