ಪಟ್ಟಣದ ಬಾಲಕಿಯರ ವಿದ್ಯಾಸಂಸ್ಥೆಯ ವಿಜ್ಞಾನ ವಿಭಾಗದ ನೂತನ ಕಟ್ಟಡ ಮತ್ತು ಪಿಇಎಸ್ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. 
ಮಂಡ್ಯ

ಉತ್ತರ ಭಾರತದ ಶಿಕ್ಷಣ ಸಂಸ್ಥೆಗಳಿಂದ ನೀಟ್ ಲೀಕ್

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ

ಪಾಂಡವಪುರ:

ಉತ್ತರ ಭಾರತದ ಶಿಕ್ಷಣ ಸಂಸ್ಥೆಗಳು ಪಠ್ಯದ ಜತೆಗೆ ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತವೆ. ಅಲ್ಲದೆ ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡಿಕೊಂಡು ಪರೀಕ್ಷೆ ಬರೆಸುತ್ತಿದ್ದಾರೆ. ಇದರಿಂದ ರಾಜ್ಯದ ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಬಾಲಕಿಯರ ವಿದ್ಯಾಸಂಸ್ಥೆಯ ವಿಜ್ಞಾನ ವಿಭಾಗದ ನೂತನ ಕಟ್ಟಡ ಮತ್ತು ಪಿಇಎಸ್ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಗ್ರಾಮೀಣ ಭಾಗದ ವಿಜ್ಞಾನ ಕಾಲೇಜುಗಳಲ್ಲಿ ಪಿಯು ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ವಾರಕ್ಕೆ ಒಂದು ದಿನ ಒಂದು ಗಂಟೆಯಾದರೂ ನೀಟ್ ಪರೀಕ್ಷೆಗೆ ತರಬೇತಿ ನೀಡಬೇಕು. ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬುದು ಪಾಲಕರ ಅಭಿಲಾಷೆಯಾಗಿದೆ. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದೇ ಇದೆ. ಆತ್ಮಸ್ಥೈರ್ಯ ಬೆಳೆಸಿಕೊಂಡು ಶಿಕ್ಷಣ ಪಡೆಯಬೇಕಿದೆ. ಶಿಕ್ಷಣ ಪಡೆದವರಿಗೆಲ್ಲ ನಿರೀಕ್ಷೆಯಂತೆ ಉದ್ಯೋಗ ದೊರೆಯುತ್ತದೆ ಎಂದು ಹೇಳಲಾಗದು. ಆದರೆ ಭರವಸೆ ಇಟ್ಟುಕೊಂಡು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಕೇವಲ 169 ಪ್ರಥಮ ದರ್ಜೆ ಕಾಲೇಜುಗಳ ಮಾತ್ರ ಇದ್ದವು. ಹೊಸದಾಗಿ 189 ಪ್ರಥಮ ದರ್ಜೆ ಕಾಲೇಜುಗಳನ್ನು ಪ್ರಾರಂಭಿಸಿದೆ. ಹೊಸದಾಗಿ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಿದೆ. ಆದರೆ ಇಂದಿನ ಸರ್ಕಾರ ಶಿಕ್ಷಣದ ಬೆಳೆವಣಿಗೆಗೆ ಯಾವ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಮುಂದಿನ ದಿನಗಳಲ್ಲಿ 5 ವರ್ಷಗಳ ಕಾಲ ನನಗೆ ಅಧಿಕಾರ ಸಿಕ್ಕರೆ ಶಿಕ್ಷಣದಲ್ಲಿ ಒಂದು ಹೊಸ ಕ್ರಾಂತಿ ಮಾಡುತ್ತೇನೆ ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಶಿಕ್ಷಣ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಬಡ ಹೆಣ್ಣುಮಕ್ಕಳಿಗಾಗಿಯೇ ಅನುಕೂಲವಾಗಲೆಂದು ನಮ್ಮ ಸಂಸ್ಥೆಯಲ್ಲಿ ಈ ಸಾಲಿನಿಂದ ಎಲ್‌ಕೆಜಿ ಮತ್ತು 1ನೇ ತರಗತಿ ಪ್ರಾರಂಭಿಸಿದ್ದೇವೆ. 1.75 ಕೋಟಿ ರೂ.ವೆಚ್ಚದಲ್ಲಿ ದಿ.ಚೆನ್ನಮ್ಮ ಹೆಸರಿನಲ್ಲಿ ಸಭಾಂಗಣ ನಿರ್ಮಿಸಿಕೊಡಲು ಎಚ್.ಡಿ.ಕುಮಾರಸ್ವಾಮಿ ಒಪ್ಪಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಟಿ.ರಾಮಕೃಷ್ಣೇಗೌಡ, ನಿರ್ದೇಶಕರಾದ ಎಚ್.ಮಂಜುನಾಥ್, ಗರಡಿಮನೆ ನಾರಾಯಣಗೌಡ, ಬಾಲಕೃಷ್ಣರೆಡ್ಡಿ, ಪುಟ್ಟೇಗೌಡ, ಪ್ರೊ.ಎಚ್.ಆರ್.ತಿಮ್ಮೇಗೌಡ, ಎಸ್.ನಾರಾಯಣಗೌಡ, ಚಿಕ್ಕಾಡೆ ಶ್ರೀಕಾಂತ್, ಹಿರೇಮರಳಿ ಸತೀಶ್, ರಾಗಿಮುದ್ದನಹಳ್ಳಿ ಶಿವಣ್ಣ, ಪ್ರಾಂಶಪಾಲೆ ಮಮತಾ ಇತರರು ಇದ್ದರು.