ಕಿಕ್ಕೇರಿ ಸರ್ಕಾರಿ ಕೆಪಿಎಸ್ ಪ್ರೌಢಶಾಲೆಯಲ್ಲಿ ಬುಧವಾರ ಎನ್‌ಸಿಸಿ ತರಬೇತಿ ಆಯ್ಕೆಗೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಲುವನಾರಾಯಣಸ್ವಾಮಿ, ಎಸ್.ಎಂ. ಬಸವರಾಜು, ಎನ್‌ಸಿಸಿ ಅಧಿಕಾರಿಗಳು ಇದ್ದರು.
ಕಿಕ್ಕೇರಿ: ಶಿಸ್ತು, ಸಂಯಮ, ಸಮಯಪ್ರಜ್ಞೆ ಎಲ್ಲವನ್ನೂ ಕಲಿಸುವ ಎನ್‌ಸಿಸಿ ಸೇರಿ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಿ ಎಂದು ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ಕೆಪಿಎಸ್ ಪ್ರೌಢಶಾಲೆಯಲ್ಲಿ 2026-27ನೇ ಸಾಲಿಗೆ ಹಮ್ಮಿಕೊಳ್ಳಲಾಗಿದ್ದ ಏರ್‌ಪೋರ್ಸ್ ಎನ್‌ಸಿಸಿ ತರಬೇತಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ತರಬೇತಿ ಪಡೆಯುವುದರಿಂದ ನಾಯಕತ್ವ, ಶಿಸ್ತು, ಶ್ರದ್ಧೆ, ಸಂಯಮ, ದೇಶ ಪ್ರೇಮ, ಸ್ವಾಭಿಮಾನ, ಸಹಕಾರ ಮನೋಭಾವ, ಆತ್ಮಸ್ಥೈರ್ಯ ಎಲ್ಲವೂ ಲಭಿಸಲಿದೆ. ಉನ್ನತ ವ್ಯಾಸಂಗ, ಉದ್ಯೋಗಕ್ಕೆ ಸುಲಭವಾಗಿ ಸೇರಲು ಎನ್‌ಸಿಸಿ ಉಪಯೋಗವಾಗಿದೆ. ವಿಶೇಷ ಕೃಪಾಂಕ ಈ ವಿದ್ಯಾರ್ಥಿಗಳಿಗೆ ಇದ್ದು, ಪರೇಡ್‌ಗಳಲ್ಲಿ ವಿಶೇಷ ತರಬೇತಿ ಪಡೆಯುವ ಮಕ್ಕಳಿಗೆ ನೀಡುವ ಅರ್ಹತಾ ಪತ್ರ ಉಪಯೋಗಕರವಾಗಲಿದೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳ ದೈಹಿಕ ಸಾಮರ್ಥ್ಯಕ್ಕೆ ಎನ್‌ಸಿಸಿ ತರಬೇತಿ ಸೂಕ್ತವಾಗಿ ಹೊಂದಿಕೊಳ್ಳಲಿದೆ. ಕಷ್ಟದ ಓದಿಗೆ ಉನ್ನತ ವ್ಯಾಸಂಗ, ಉದ್ಯೋಗಕ್ಕೆ ಕೃಪಾಂಕ ಬಲು ಸಹಕಾರಿಯಾಗಲಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮೈಸೂರಿನ ಏರ್‌ಪೋರ್ಸ್ ಯುನಿಟ್‌ನ ದಿವ್ಯಾ, ಕಾರ್ಪೊರಲ್ ಸುಜಾರಾಮ್, ಆಕಾಸ್‌ಕುಮಾರ್, ಸಾಜೆರ್ಂಟ್ ಸುಧಾನ್ಸು ಗೋಯಲ್ ಹಾಗೂ ಸಾರ್ಜೆಂಟ್ ರಂಜನ್ ಅವರು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ಹಾಗೂ ಸಂದರ್ಶನವನ್ನು ಮಾಡಿ ಆಸಕ್ತ ಹಾಗೂ ಅರ್ಹ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಎನ್‌ಸಿಸಿ ಅಧಿಕಾರಿ ಎಸ್.ಎಂ.ಬಸವರಾಜು, ಶಿಕ್ಷಕ ಬಿ.ಎನ್.ಪರಶಿವಮೂರ್ತಿ. ದೀಪಕ್ ಪಟೇಲ್, ನಂದಿನಿ, ರಾಗಿಣಿ ಇದ್ದರು.