ಮಂಡ್ಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.
- ರಾಷ್ಟ್ರೀಯ ಯುವ ದಿನ
- ದಿವ್ಯ ಚೇತನ ಸ್ವಾಮಿ ವಿವೇಕಾನಂದರ 63ನೇ ಜನ್ಮ ದಿನೋತ್ಸವ
- ಮಂಡ್ಯ ವಿಶ್ವವಿದ್ಯಾಲಯದಲ್ಲಿ ಆಚರಣೆ
ಮಂಡ್ಯ: ಎಷ್ಟು ವರ್ಷ ಬದುಕಿದ್ದರೂ ಎನ್ನುವುದು ಮುಖ್ಯವಲ್ಲ. ಬದಲಿಗೆ ಬದುಕಿದಂತಹ ಅವಧಿಯಲ್ಲಿ ಸಮಾಜಕ್ಕೆ ಅವರು ಏನು ಕೊಡುಗೆ ನೀಡಿದರು ಎನ್ನುವುದು ಮುಖ್ಯ. ಈ ನಿಟ್ಟಿನಲ್ಲಿ ವಿಶ್ವದಲ್ಲಿ ಭಾರತವನ್ನು ಅತ್ಯಂತ ಘನತೆ ಮತ್ತು ಗೌರವದಿಂದ ನೋಡುವಂತೆ ಮಾಡಿದವರು ಸ್ವಾಮಿ ವಿವೇಕಾನಂದರು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ಕೇಂದ್ರ, ಮಂಡ್ಯ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಗಣಕ ವಿಜ್ಞಾನ ವಿಭಾಗದ ಸಹಯೋಗದಲ್ಲಿ ದಿವ್ಯ ಚೇತನ ಸ್ವಾಮಿ ವಿವೇಕಾನಂದರ 63ನೇ ಜನ್ಮ ದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಆದರ್ಶ, ಚಿಂತನೆ, ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದರ ಮೂಲಕ ದೇಶಕ್ಕೆ ಮಾದರಿ ವ್ಯಕ್ತಿಗಳಾಗಬೇಕು ಎಂದು ಸಲಹೆ ನೀಡಿದರು.
ಸ್ವಾಮಿ ವಿವೇಕಾನಂದರು ನಂಬಿದ್ದ ಒಂದು ಶಕ್ತಿ ಎಂದರೆ ಅದು ಭಾರತದ ಯುವ ಶಕ್ತಿ. ಯುವ ಸಮೂಹ ಸರಿ ದಾರಿಯಲ್ಲಿ ಹೋದರೆ ಮಾತ್ರ ಈ ದೇಶವನ್ನು ಸಮೃದ್ಧ ದೇಶೀಯವಾಗಿ ನಿರ್ಮಿಸಬಹುದು ಎಂಬ ಕನಸು ಕಂಡಿದ್ದರು. 1893 ಸೆ.11 ರಂದು ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾರತದ ಸಂಸ್ಕೃತಿಯ ಪರಂಪರೆಯನ್ನು ಎತ್ತಿ ಹಿಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯುವ ಪೀಳಿಗೆ ಇತಿಹಾಸ ತಿಳಿಯಬೇಕು. 1890ರಲ್ಲಿ ಭಾರತ ದೇಶವನ್ನು ಬಿಟ್ಟು 1893(3ವರ್ಷ) ರವರೆಗೆ ವಿಶ್ವದ ಎಲ್ಲ ಸಮ್ಮೇಳನಗಳಲ್ಲಿ ಭಾಗಿಯಾಗಿ ಪ್ರವಚನಗಳನ್ನು ನೀಡಿ ಭಾರತದ ಸಂಸ್ಕೃತಿಯ ಪ್ರತೀಕವಾಗಿ ವಿಶ್ವಕ್ಕೆ ಭಾರತ ಎಂದರೆ ಏನು ಎಂದು ತಿಳಿಸಿಕೊಟ್ಟ ಮಹಾನ್ ಚೇತನ ಸ್ವಾಮಿ ವಿವೇಕಾನಂದರು ಎಂದು ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದರು ಅಮೆರಿಕಾದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಇವತ್ತಿಗೂ ಇಡೀ ವಿಶ್ವವೇ ಅವರ ಭಾಷಣವನ್ನು ಕೊಂಡಾಡಿ ಗುರುತಿಸುವಂತೆ ಮಾಡಿದ್ದಾರೆ. ನಮ್ಮ ದೇಶವನ್ನು ಹೊರ ದೇಶಗಳು ಅತ್ಯಂತ ಗೌರವ ಘನತೆಯಿಂದ ಕಾಣುವುದಕ್ಕೆ ಕಾರಣ ಅವರು ವಾಕ್ಚಾತುರ್ಯ. ಭಾರತ ದೇಶವನ್ನು ತಿಳಿದುಕೊಳ್ಳಲು ಸ್ವಾಮಿ ವಿವೇಕಾನಂದರ ಕುರಿತಾಗಿ ಓದಿ. ಯುವಕ ಯುವತಿಯರಿಗೆ ಸ್ಪಷ್ಟವಾದ ಗುರಿ, ನಂಬಿಕೆ, ಶಕ್ತಿ, ವಿಶ್ವಾಸ ಇರಬೇಕು. ದೇವರನ್ನು ನಂಬುವುದು ಮುಖ್ಯವಲ್ಲ, ನಿಮ್ಮಲ್ಲಿರುವ ದೃಢತೆಯ ಮೇಲೆ ನಂಬಕೆ ಇರಬೇಕು. ಗುರಿ ಎಷ್ಟು ಮುಖ್ಯನೋ ದಾರಿಯು ಅಷ್ಟೇ ಮುಖ್ಯ. ಸಮಾಜದಲ್ಲಿ ಬುದ್ದಿವಂತರಾಗಿ ಪ್ರಜ್ಞಾವಂತರಾಗಿ ಮತ್ತು ಹೃದಯವಂತಿಕೆಯಿಂದ ಬದುಕಬೇಕು ಎಂದು ಹೇಳಿದರು.
ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಜನತೆಗೆ ಸ್ಫೂರ್ತಿ. ಎಷ್ಟು ವರ್ಷ ಸೇವೆ ಸಲ್ಲಿಸುತ್ತೇವೆ ಎಷ್ಟು ವರ್ಷ ಜೀವಿಸುತ್ತೇವೆ ಎನ್ನುವುದು ಮುಖ್ಯವಲ್ಲ. ನಮ್ಮ ಅವಧಿಯಲ್ಲಿ ಎಷ್ಟು ಕೆಲಸ ಕಾರ್ಯಗಳು ಆಗಿವೆ ಎನ್ನುವುದು ಮುಖ್ಯ. ಸ್ವಾಮಿ ವಿವೇಕಾನಂದ ಅವರು ರಾಮಕೃಷ್ಣ ಪರಮಹಂಸರ ಆಪ್ತ ಶಿಷ್ಯರಾಗಿದ್ದರು. ಗುರು ಶಿಷ್ಯರ ಸಂಬಂಧ ಮುಖ್ಯವಾದದ್ದು ಎಂದು ಮಾತನಾಡಿದರು
ಅರ್ಕೇಶ್ವರನಗರದ ಬಾಲಕಿಯರ ಸರ್ಕಾರಿ ಪದವ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಮನು ಗೊರವಾಲೆ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಯುವರಾಷ್ಟ್ರ ಎಂದು ಕರೆಸಿಕೊಳ್ಳುವ ಏಕೈಕ ದೇಶ ಭಾರತ ಮಾತ್ರ. ಭಾರತದಲ್ಲಿರುವ ಯುವಕರ ಸಂಖ್ಯೆ ಪಾಶ್ಚಿಮಾತ್ಯ 5 ರಿಂದ 6 ದೇಶಗಳ ಜನಸಂಖ್ಯೆಯಾಗಿದೆ. ಹಾಗಾಗಿ ಯುವ ಸಮೂಹವನ್ನು ಒಳಗೊಂಡಿದೆ. ಪ್ರಸ್ತುತ ಯುವಕರು ಸ್ವಾಮಿ ವಿವೇಕಾನಂದ ಅವರ ಕುರಿತಾಗಿ ಹೆಚ್ಚು ತಿಳಿದುಕೊಳ್ಳಬೇಕು. ಅವರ ಆದರ್ಶ ಮತ್ತು ಮೌಲ್ಯಗಳ ಪಾಲನೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರತರಾಗಬೇಕು ಎಂದು ಉಪನ್ಯಾಸ ನೀಡಿದರು.
ಮುಡಾ ಆಯುಕ್ತ ಕೃಷ್ಣಕುಮಾರ್, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಸಂಯೋಜಕಿ ಡಾ.ಎಂ.ಬಿ.ಪ್ರಮೀಳಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್ ಇತರರಿದ್ದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಇತಿಹಾಸ ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು. ಯುವ ಜನತೆ ಇತಿಹಾಸವನ್ನು ಮೊದಲು ತಿಳಿದುಕೊಳ್ಳಬೇಕು. ಮುಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರ ಆದರ್ಶ, ಮೌಲ್ಯಗಳನ್ನು ತಿಳಿದುಕೊಳ್ಳಬೇಕು. ಈ ಮೂಲಕ ಒಳ್ಳೆಯ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು.