ಮಂಡ್ಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಬೂತ್ ಮಟ್ಟದ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.
ಮಂಡ್ಯ: ಪ್ರತಿಯೊಂದು ಮತಕ್ಕೂ ತನ್ನದೇ ಆದ ಮಹತ್ವವಿದೆ. ಹಾಗಾಗಿ ಮತದಾರರು ಚುನಾವಣೆ ನಡೆಯುವ ದಿನಾಂಕದಂದು ತಪ್ಪದೆ ಮತದಾನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ.ಎನ್.ಸುಬ್ರಹ್ಮಣ್ಯ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, 1950 ಜ.25ರಂದು ಚುನಾವಣಾ ಆಯೋಗ ಸ್ಥಾಪಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಗ್ರಾಮ ಪಂಚಾಯಿತಿಯಿಂದ ಲೋಕಸಭಾ ಚುನಾವಣೆವರೆಗೆ 200ಕ್ಕೂ ಹೆಚ್ಚು ಚುನಾವಣೆಗಳನ್ನು ಯಶಸ್ವಿಯಾಗಿ ಚುನಾವಣೆ ಆಯೋಗ ನಡೆಸಿದೆ. 1985ರಲ್ಲಿ ಚುನಾವಣೆಯಲ್ಲಿ ಭಾಗವಹಿಸಲು ಇರಬೇಕಾದ ಕನಿಷ್ಟ ವಯೋಮಿತಿಯನ್ನು 21 ರಿಂದ 18 ವರ್ಷಕ್ಕೆ ತರಲಾಯಿತು. ಇದೇ ಕಾರಣದಿಂದ ಅಂದಿನ ಕಾಲದಲ್ಲಿ ಶೇ 20 ರಷ್ಟು ಮತದಾನ ಹೆಚ್ಚಾಯಿತು ಎಂದು ಹೇಳಿದರು.
ಇತ್ತೀಚಿಗಷ್ಟೇ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಲ್ಲಿ ಒರ್ವ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದರ ಅರ್ಥ ಮತದಾನ ಮಹತ್ವ ಎಷ್ಟಿದೆ ಎಂಬುದಾಗಿದೆ. ಮತದಾನದ ದಿನದಂದು ಎಲ್ಲರಿಗೂ ಸಾರ್ವಜನಿಕ ರಜೆ ಇರುತ್ತದೆ. ನೌಕರಿಯಲ್ಲಿ ಇದ್ದವರಿಗೆ ಮತದಾನದ ಹಿಂದಿನ ದಿವಸ ಅಥವಾ ಮರು ದಿವಸ ರಜೆ ನೀಡಬೇಕು ಸರ್ಕಾರದ ಸುತ್ತೋಲೆ ಇದೆ. ಮತದಾರರು ತಮ್ಮ ಊರುಗಳಿಗೆ ತೆರಳಿ ತಪ್ಪದೆ ತಮ್ಮ ಮತವನ್ನು ಚಲಾಯಿಸಬೇಕು. ಚುನಾವಣೆಗೆ ಮೂರು ಮುಕ್ಕಾಲು ತಿಂಗಳ ಇರುವ ಕಾಲದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಿಕ್ಷಕರಿಗೆ ವಿಶೇಷ ಅಧಿಕಾರ ಇರುತ್ತದೆ. ಮೂರು ಇಲಾಖೆ ಶ್ರಮವಹಿಸಿ ಚುನಾವಣೆಯಲ್ಲಿ ಭ್ರಷ್ಟಾಚಾರ ವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಭಾರತ ಒಂದು ಪ್ರಜಾಪ್ರಭುತ್ವ ದೇಶ. ಪ್ರಜೆಗಳೆ ಭಾರತದಲ್ಲಿ ಪ್ರಭುಗಳು. ದೇಶ ಚೆನ್ನಾಗಿ ಇರಬೇಕಾದರೆ ಸೂಕ್ತ ನಾಯಕರನ್ನು ಆಯ್ಕೆ ಮಾಡುವುದು ಮುಖ್ಯ. ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ, ಹೊಣೆಗಾರಿಕೆ ಮತ್ತು ಕರ್ತವ್ಯ ಪ್ರಜೆಗಳ ಮೇಲಿದೆ. ನಮ್ಮ ಆಳುವ ನಾಯಕರು ಸರಿ ಇರಬೇಕು ಎಂದರೆ ಪ್ರಜೆಗಳು ಸರಿ ಇರಬೇಕು. ಮತದಾರರಿಗೆ ನಾಯಕರನ್ನು ಆಯ್ಕೆ ಮಾಡುವಾಗ ನೈತಿಕ ಚಿಂತನೆ ಇಟ್ಟುಕೊಂಡು ಪ್ರಜ್ಞಾವಂತಿಕೆಯಿಂದ ಆಯ್ಕೆ ಮಾಡಬೇಕು. 1950ರಲ್ಲಿ ಸಂವಿಧಾನಾತ್ಮಕವಾಗಿ ರಚನೆಗೊಂಡ ಚುನಾವಣಾ ಆಯೋಗದ ನೆನಪಿಗಾಗಿ ಪ್ರತಿವರ್ಷ ಮತದಾರ ದಿನವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇದರ ಉದ್ದೇಶ ಪ್ರತಿ ಮತದಾರರು ಕೂಡ ಪ್ರಜಾಸತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವುದು. ಪ್ರತಿ ಮತದಾರರಿಗೂ ಮತದಾನದ ಮಹತ್ವ ತಿಳಿಸುವುದು. ಯಾವುದೇ ಮತದಾರರು ಮತದಾನ ದಿಂದ ಹಿಂದೂಳಿಯ ಬಾರದು ಎಂಬುದಾಗಿದೆ ಎಂದು ಹೇಳಿದರು.
ಈ ವರ್ಷ ಮತದಾರ ದಿನಾಚರಣೆಯನ್ನು ನನ್ನ ಭಾರತ ನನ್ನ ಮತದಾನ ಎಂಬ ಘೋಷವಾಕ್ಯದಡಿ ಆಚರಿಸಲಾಗುತ್ತಿದೆ. ವರ್ಷಕ್ಕೆ ನಾಲ್ಕು ಬಾರಿ ಮನೆಮನೆಗೆ ಹೋಗಿ 18 ವರ್ಷ ತುಂಬಿದವರನ್ನು ಮತದಾನ ಪಟ್ಟಿಯಲ್ಲಿ ಸೇರಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ದೇಶದ ಯುವ ಜನತೆ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ನಗರದ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮತದಾನ ಮಾಡಿರುವ ಜಿಲ್ಲೆಗಳಲ್ಲಿ ಮಂಡ್ಯ ಶೇ.81.61 ಮತದಾನ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಭಾರತೀಯ ಸಂವಿಧಾನದಲ್ಲಿ ಭಾಗ ಮೂರು ಮತ್ತು ಭಾಗ ನಾಲ್ಕು ಇದೆ. ಭಾಗ ಮೂರು ಪ್ರತಿ ಭಾರತೀಯರಿಗೂ ಸಂವಿಧಾನಿಕ ಹಕ್ಕುಗಳನ್ನು ನೀಡಿದೆ. ಭಾಗ ನಾಲ್ಕು ಸಂವಿಧಾನಿಕ ಕರ್ತವ್ಯದ ಕುರಿತು ತಿಳಿಸುತ್ತದೆ. ಸಂವಿಧಾನಿಕ ಕರ್ತವ್ಯಗಳಲ್ಲಿ ಮತದಾನವೂ ಒಂದಾಗಿದೆ. ಮತದಾನ ಮಾಡುವ ಸಂದರ್ಭದಲ್ಲಿ ಜಾತಿ ಧರ್ಮ ಮತ್ತು ಲಿಂಗಗಳ ಭೇದ ತೊರೆದು ನಾನು ಭಾರತೀಯ ಜಾಗೃತ ಮತದಾರ ಎಂಬ ಭಾವನೆಯಿಂದ ಮತದಾನ ಮಾಡಬೇಕು. ಇವತ್ತಿಗೂ ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಗ್ರಾಮದಿಂದ ರಾಷ್ಟ್ರದವರೆಗೂ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ದೇಶ ಭಾರತವಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮಹಿಳೆಯರು ಮೀಸಲಾತಿ ಬರುವುದರಲ್ಲಿದೆ. ಮಹಿಳೆಯರು ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಚುನಾವಣೆಯ ಮಹತ್ವವನ್ನು ತಿಳಿಯಬೇಕು. ಭಾರತದ ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಚುನಾವಣೆಯಲ್ಲಿ ಮಹಿಳೆಯ ಪ್ರಾತಿನಿಧ್ಯ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಶಿವಲಿಂಗಯ್ಯ, ಜಿಪಂ ಆಡಳಿತಾಧಿಕಾರಿ ಲಕ್ಷ್ಮೀ, ತಹಸೀಲ್ದಾರ್ ವಿಶ್ವನಾಥ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಸೀಲ್ದಾರ್ ರವಿಶಂಕರ್ ಇತರರಿದ್ದರು. ಇದೇ ವೇಳೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.