ಕೆ.ಆರ್.ಪೇಟೆ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ತಹಸೀಲ್ದಾರ್ ಲೆ.ಕರ್ನಲ್ ಡಾ.ಎಸ್.ಯು.ಅಶೋಕ್ ಮಾತನಾಡಿದರು.
ಕೆ.ಆರ್.ಪೇಟೆ: ತಂಬಾಕು ಉತ್ಪನ್ನಗಳಿಂದ ಆಗುವ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಚರ್ಮದ ಕಾಯಿಲೆ, ಮಾನಸಿಕ ಕಾಯಿಲೆ ಬಗ್ಗೆ ಅರಿವು ಮೂಡಿಸುವಂತೆ ತಹಸೀಲ್ದಾರ್ ಲೆ.ಕರ್ನಲ್ ಡಾ.ಎಸ್.ಯು. ಅಶೋಕ್ ಸಲಹೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 394 ಶಾಲಾ-ಕಾಲೇಜುಗಳು, 400 ಅಂಗನವಾಡಿ ಕೇಂದ್ರಗಳು, ಸರ್ಕಾರಿ ಕಚೇರಿಗಳು ಇವೆ. ಇವುಗಳಿಂದ 100 ಮೀಟರ್ ಅಂತರದ ಒಳಗೆ ಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು. ಇದನ್ನು ಉಲ್ಲಂಘಿಸಿದರೆ ದಂಡ ವಿಧಿಸಿ, ಕೇಸ್ ದಾಖಲಿಸಲಾಗುವುದು. ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಅಂಗಡಿ, ಹೋಟೆಲ್, ಬೇಕರಿಗಳಿಗೆ ಪರವಾನಿಗೆ ಕೊಡುವಾಗ ಈ ಮಾಹಿತಿಯನ್ನು ನೀಡಿ ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರಿಗೆ ತಂಬಾಕಿನಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಲು ಎಲ್ಲ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ತಾಲೂಕಿನಲ್ಲಿ ಹೋಬಳಿಗೆ ಒಂದರಂತೆ ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಲು ಅಧಿಕಾರಿಗಳು, ನೌಕರರು ಸಹಕಾರ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಬಿಸಿಎಂ ಅಧಿಕಾರಿ ಎಂ.ಎನ್.ವೆಂಕಟೇಶ್, ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ಪ್ರಭುಕುಮಾರ್, ಆಯುಷ್ ಇಲಾಖೆಯ ಡಾ.ಸುಬ್ರಹ್ಮಣ್ಯ, ಆರೋಗ್ಯ ಇಲಾಖೆಯ ಡಾ.ಶಶಿಕಾಂತ್, ಸತೀಶ್, ವಿನಯ್, ಜ್ಯೋತಿ, ಪುರಸಭೆ ಅಧಿಕಾರಿಗಳು ಇದ್ದರು.