ಮಂಡ್ಯ ನಗರದ ಆರ್‌ಟಿಒ ಕಚೇರಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಶಿಬಿರದಲ್ಲಿ ಸಂಗ್ರಹವಾದ ರಕ್ತವನ್ನು ಮಿಮ್ಸ್‌ಗೆ ಹಸ್ತಾಂತರಿಸಲಾಯಿತು.  
ಮಂಡ್ಯ

ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಲಿ: ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಜೆ.ಹೇಮಾವತಿ ಸಲಹೆ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ
  • 60ಕ್ಕೂ ಹೆಚ್ಚು ಜನರಿಂದ ರಕ್ತದಾನ
  • ಮಿಮ್ಸ್ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರ
ಮಂಡ್ಯ: ರಕ್ತದಾನ ಮಹಾದಾನ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಜೆ.ಹೇಮಾವತಿ ಸಲಹೆ ನೀಡಿದರು.
ನಗರದ ಆರ್‌ಟಿಒ ಕಚೇರಿ ಆವರಣದಲ್ಲಿ ರಸ್ತೆ ಸುರಕ್ಷತಾ ಸಮಿತಿ, ಮಂಡ್ಯ ಪ್ರಾದೇಶಿಕ ಸಾರಿಗೆ ಕಚೇರಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಮಿಮ್ಸ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಆರ್‌ಟಿಒ ಕಚೇರಿಗೆ ಬರುವ ಚಾಲಕರು ಮತ್ತು ಮಾಲೀಕರು, ಡಿಎಲ್ ಅಭ್ಯರ್ಥಿಗಳು, ಸಾರ್ವಜನಿಕರು ರಕ್ತದಾನ ಮಾಡಿ. ಅಪಘಾತದ ಸಂದರ್ಭದಲ್ಲಿ ರಕ್ತ ಬೇಕಾಗುತ್ತದೆ. ಆದ್ದರಿಂದ ರಕ್ತದಾನ ಮಾಡುವುದರಿಂದ ಪ್ರಾಣಾಪಾಯದಲ್ಲಿರುವ ವ್ಯಕ್ತಿಗೆ ಅನುಕೂಲವಾಗುತ್ತದೆ ಎಂದರು.
ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ರಸ್ತೆ ಅಪಘಾತದಲ್ಲಿ ಪ್ರತಿವರ್ಷ ಲಕ್ಷಾಂತರ ಜನ ಯುವಜನರು ಸಾಯುತ್ತಿರುವ ನಿದರ್ಶನಗಳಿವೆ. ರಾಷ್ಟ್ರೀಯ ಯುವ ನೀತಿಯ ಪ್ರಕಾರ 13 ರಿಂದ 28 ವರ್ಷದ ಯುವ ಜನರು ರಸ್ತೆ ಅಪಘಾತಗಳಲ್ಲಿ ಅಸುನೀಗುತ್ತಿರುವ ಆತಂಕದ ಕ್ಷಣಗಳನ್ನು ದೂರ ಮಾಡಲು ಸಾರಿಗೆ ಇಲಾಖೆಯಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಸಾರಿಗೆ ವಾಹನ ನಿರೀಕ್ಷಕ ಅಶೋಕ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಾಹನಗಳು ಹೆಚ್ಚಾಗುತ್ತಿರುವಂತೆ ಅಪಘಾತಗಳು ಸಹ ಹೆಚ್ಚುತ್ತಿವೆ. ಅಪಘಾತಗಳನ್ನು ತಡೆಗಟ್ಟಲು ಜಾಗೃತವಾಗಿ ವಾಹನ ಚಲಾಯಿಸಬೇಕು. ಅಪಘಾತಗಳ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚು ಇರುತ್ತದೆ. ರಕ್ತ ಕೊಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹೇಳಿದರು.
ವಾಹನ ನಿರೀಕ್ಷಕ ಚಿಕ್ಕಮಾಯಿಗೌಡ, ಸಾರಿಗೆ ಇಲಾಖೆಯ ಚಂದ್ರಶೇಖರ್, ಮಂಜುನಾಥ್‌ರಾಜ್, ಚನ್ನಕೇಶವ, ಪ್ರಾಧ್ಯಾಪಕ ಕೆ.ಪಿ.ಮೃತ್ಯುಂಜಯ, ರಕ್ತನಿಧಿ ಕೇಂದ್ರದ ಮಹಮ್ಮದ್ ರಫಿ, ರಾಜು ಇತರರಿದ್ದರು. ಇದೇ ವೇಳೆ 60ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಯಿತು. ಅದನ್ನು ಮಿಮ್ಸ್ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರ ಮಾಡಲಾಯಿತು.