ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸಲಾಯಿತು.
- ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಕಾರ್ಯಕ್ರಮ
- ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜನೆ
ಮಂಡ್ಯ: ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿ ಅಧಿಕಾರಿ, ಸಿಬ್ಬಂದಿ ಸಮಾಜದ ಪರಿವರ್ತನೆಯ ಭಾಗ. ಅಂತೆಯೇ ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ಅವರ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅಭಿಪ್ರಾಯಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ದಿನ ಕೇವಲ ಸಾಂಕೇತಿಕ ಆಚರಣೆಗೆ ಸೀಮಿತವಾಗದಿರಲಿ. ಅಧಿಕಾರಿ, ಸಿಬ್ಬಂದಿ ಶಿಸ್ತು, ಸೇವೆ, ಸಾಧನೆ ಹಾಗೂ ಬದ್ಧತೆಯನ್ನು ಗುರುತಿಸುವ ಉದ್ದೇಶದಿಂದ ಪಂಚಾಯತ್ ರಾಜ್ ದಿನವನ್ನು ಆಯೋಜಿಸಲಾಗಿದೆ. ತಂಡದ ಕಾರ್ಯಪದ್ಧತಿ, ಶಿಸ್ತು, ನೈತಿಕತೆ, ಆರೋಗ್ಯಕರ ಜೀವನಶೈಲಿ ಹಾಗೂ ಆತ್ಮತೃಪ್ತಿಯಿಂದ ಕಾರ್ಯನಿರ್ವಹಿಸುವುದು ಉತ್ತಮ ಎಂದು ಹೇಳಿದರು.
ಜಿಲ್ಲೆಯ ಪಂಚಾಯತ್ ರಾಜ್ ಇಲಾಖೆಯ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ವಿಶೇಷವಾಗಿ ತೆರಿಗೆ ಸಂಗ್ರಹಣೆಯಲ್ಲಿ ದಾಖಲೆ ಸಾಧಿಸಿದೆ. ಸಿಬ್ಬಂದಿ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳಿಸಿರುವುದು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಶ್ರಮ ಪ್ರಮುಖ ಪಾತ್ರ ವಹಿಸಿದೆಯೆಂದು ಶ್ಲಾಘಿಸಿದರು.
ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಪಿ.ಲಕ್ಷ್ಮೀ, ಉಪ ಕಾರ್ಯದರ್ಶಿ(ಆಡಳಿತ) ಡಾ.ಶಿವಲಿಂಗಯ್ಯ, ಮುಖ್ಯಯೋಜನಾಧಿಕಾರಿ ಎಸ್.ಧನುಷ್ ಇತರರಿದ್ದರು.
ಇದೇ ವೇಳೆ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸುವಲ್ಲಿ ಹಾಗೂ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದಲ್ಲಿ ಮಹತ್ವದ ಪಾತ್ರವಹಿಸಿದ ವಿವಿಧ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದೇ ರೀತಿ ಬೇಸಿಗೆ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಕೊಡುಗೆ ನೀಡಿದ ಶಾಲಾ ಶಿಕ್ಷಕರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.