ಮಂಡ್ಯ ತಾಲೂಕು ಸುಂಡಹಳ್ಳಿಯಲ್ಲಿರುವ ಸಿಐಟಿ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 
ಮಂಡ್ಯ

ಪ್ರತಿಭೆ ಬೆಳೆಸಲು ಹ್ಯಾಕಥಾನ್ ಉತ್ತಮ ವೇದಿಕೆ: ಪ್ರಾಂಶುಪಾಲ ಡಾ.ಎ.ಎಸ್.ಶ್ರೀಕಂಠಪ್ಪ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆ ಬೆಳೆಸಲು ಹಾಗೂ ತಾಂತ್ರಿಕ ಪ್ರತಿಭೆ ಹೊರತರಲು ಹ್ಯಾಕಥಾನ್ ಸ್ಪರ್ಧೆಗಳು ಅತ್ಯುತ್ತಮ ವೇದಿಕೆ ಎಂದು ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಸಿಐಟಿ) ಕಾಲೇಜಿನ ಪ್ರಾಂಶುಪಾಲ ಡಾ.ಎ.ಎಸ್.ಶ್ರೀಕಂಠಪ್ಪ ತಿಳಿಸಿದರು.

ತಾಲೂಕಿನ ಸುಂಡಹಳ್ಳಿಯಲ್ಲಿರುವ ಸಿಐಟಿ ಕಾಲೇಜಿನಲ್ಲಿ ರ‌್ಯಾಂಕ್‌ಬುಕ್ ಲನಿರ್ಂಗ್ ಆ್ಯಂಡ್ ಸಾಫ್ಟ್‌ವೇರ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಪ್ರಾಯೋಗಿಕ ತಾಂತ್ರಿಕ ಸ್ಪರ್ಧೆಗೆ(ಹ್ಯಾಕಥಾನ್) ಚಾಲನೆ ನೀಡಿ ಮಾತನಾಡಿದ ಅವರು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಈ ಸ್ಪರ್ಧೆಗೆ 50 ರಿಂದ 60 ತಂಡ ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ, ನಮ್ಮ ನಿರೀಕ್ಷೆಗೂ ಮೀರಿ 102 ತಂಡಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ರಾಜ್ಯದ ಉತ್ತರ ಭಾಗದ ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಸೇರಿದಂತೆ ನೆರೆಯ ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶದಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ’ಫುಲ್ ಸ್ಟಾಕ್ ಡೆವಲಪ್ಮೆಂಟ್’, ’ಸೈಬರ್ ಸೆಕ್ಯುರಿಟಿ’ ಹಾಗೂ ಪ್ರಸ್ತುತ ಬೇಡಿಕೆಯಲ್ಲಿರುವ ’ಎಐ’ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಮೂಲಕ ತಮ್ಮ ಆವಿಷ್ಕಾರವನ್ನು ಮಂಡಿಸುತ್ತಿದ್ದಾರೆ ಎಂದರು.
ಈ ಸ್ಪರ್ಧೆಯನ್ನು ಕೇವಲ ಪ್ರಶಸ್ತಿ ಅಥವಾ ಪ್ರಮಾಣ ಪತ್ರಗಳಿಗೆ ಸೀಮಿತಗೊಳಿಸಿಲ್ಲ. ವಿಜೇತ ತಂಡಗಳಿಗೆ ಕಾಲೇಜಿನ ವತಿಯಿಂದ 35,000 ರೂ. ವರೆಗೆ ನಗದು ಬಹುಮಾನ ನೀಡಲಾಗುವುದು. ಅಲ್ಲದೆ, ರ‌್ಯಾಂಕ್‌ಬುಕ್ ಸಂಸ್ಥೆಯು ವಿದ್ಯಾರ್ಥಿಗಳ ಕೌಶಲವನ್ನು ಮೌಲ್ಯಮಾಪನ ಮಾಡಲಿದ್ದು, ಅತ್ಯುತ್ತಮ ಪ್ರದರ್ಶನ ನೀಡುವ ಸುಮಾರು 25 ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ ಒದಗಿಸಲಾಗುವುದು. ಅಲ್ಲಿ ಉತ್ತಮವಾಗಿ ವೃತ್ತಿ ತರಬೇತಿ ಪಡೆದರೆ ಉದ್ಯೋಗ ಕೂಡ ದೊರೆಯಲಿದೆ. ತಂತ್ರಜ್ಞಾನದ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಸಿಐಟಿ ಸಂಸ್ಥೆ ಅಧ್ಯಕ್ಷ ಡಾ.ಸಂಗಮೇಶ್, ಕಾರ್ಯದರ್ಶಿ ಡಾ.ಗಂಗಾಧರ್‌ಗೌಡ, ಸ್ಪರ್ಧೆಯ ಸಂಚಾಲಕ ಪ್ರೊ.ಆರ್.ಅಮೋಸ್ ಇತರರಿದ್ದರು.