National leaders are insulted by vested interests
ಪಾಂಡವಪುರ : ಪಟ್ಟಣದ ತಾಪಂ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಜಯಂತಿ ವೇಳೆ ಬಾಬು ಜಗಜೀವನರಾಮ್ ಅವರ ಭಾವಚಿತ್ರ ಇರಿಸಿದ್ದಾರೆ ಎಂಬ ಕಾರಣಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗೊಂದಲ ಹಾಗೂ ಅಶಾಂತಿ ಸೃಷ್ಟಿಸುವ ಮೂಲಕ ರಾಷ್ಟ್ರ ನಾಯಕರಿಗೆ ಅಪಮಾನ ಮಾಡಿದ್ದಾರೆ. ಅಂತಹವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಕರ್ನಾಟಕ ಮಾದಾರ ಮಹಾಸಭಾ ತಾಲೂಕು ಅಧ್ಯಕ್ಷ ರವಿಕುಮಾರ್ ಆಗ್ರಹಿಸಿದರು.
ಎಲ್ಲೆಡೆ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರಿಬ್ಬರು ನಾಯಕರ ಭಾವಚಿತ್ರವಿಟ್ಟು ಕಾರ್ಯಕ್ರಮ ನಡೆಸಲಾಗಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ತುಮಕೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಕೂಡ ಇಬ್ಬರು ರಾಷ್ಟ್ರನಾಯಕರ ಭಾವಚಿತ್ರವಿರಿಸಿ ಅಂಬೇಡ್ಕರ್ ಜಯಂತಿ ಆಚರಿಸಿದ್ದಾರೆ. ಆದರೆ ಪಾಂಡವಪುರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಎಡಗೈ ಹಾಗೂ ಬಲಗೈ ಸಮುದಾಯದ ಮುಖಂಡರು ಪಟ್ಟಣದ ಐದು ದೀಪದ ವೃತ್ತದಲ್ಲಿ ಇಬ್ಬರು ರಾಷ್ಟ್ರ ನಾಯಕರಿಗೆ ಹಾರ ಹಾಗೂ ಪುಷ್ಪಾರ್ಚನೆ ಮಾಡಿದ್ದಾರೆ. ಬಳಿಕ ಯಾವುದೋ ಅನಾಮಧೇಯ ಕರೆ ಬಂದ ಹಿನ್ನೆಲೆಯಲ್ಲಿ ಬಾಬು ಜಗಜೀವನರಾಮ್ ಅವರ ಭಾವಚಿತ್ರ ಇರಿಸಿರುವುದನ್ನೇ ನೆಪ ಮಾಡಿಕೊಂಡು ಕೆಲವರು ಅಧಿಕಾರಿಗಳಿಗೆ ಧಮ್ಕಿ ಹಾಕಿ ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಒತ್ತಡ ಹಾಕಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಇದರಿಂದಾಗಿ ಇಬ್ಬರು ರಾಷ್ಟ್ರ ನಾಯಕರಿಗೆ ಅಪಮಾನ ಉಂಟಾಗಿದೆ ಎಂದರು.
ಮುಖಂಡ ಕಡಬಾ ಪುಟ್ಟರಾಜು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದಲೂ ಪಾಂಡವಪುರದಲ್ಲಿ ಮಾಜಿ ಶಾಸಕರಾದ ಕೆ.ಕೆಂಪೇಗೌಡ, ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಸಿ.ಎಸ್.ಪುಟ್ಟರಾಜುಯಾದಿಯಾಗಿ ಎಲ್ಲರೂ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಭಾವಚಿತ್ರವಿರಿಸಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಜತೆಗೆ ಪೂರ್ವಭಾವಿ ಸಭೆಗಳಲ್ಲೂ ಇಬ್ಬರು ನಾಯಕರ ಭಾವಚಿತ್ರವಿರಿಸುವಂತೆ ತೀರ್ಮಾನ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಯಾಗುತ್ತಿರುವ ಈ ಸಂದರ್ಭದಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಿ ತಾಲೂಕಿನಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಮುಂದಾಗಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಶಾಂತಿಸಭೆ ಏರ್ಪಡಿಸಿ ಅಶಾಂತಿ ವಾತಾವರಣ ತಿಳಿಗೊಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಮಾದಾರ ಮಹಾಸಭಾದ ಮುಖಂಡರಾದ ಎಸ್.ರಾಚಯ್ಯ, ಬಸ್ತಿಹಳ್ಳಿ ಕುಮಾರ್, ಹನುಮಯ್ಯ, ಎನ್.ಎಸ್.ಸ್ವಾಮಿ, ಮುರಳೀಧರ್, ಶಶಿಕುಮಾರ್, ಮಲ್ಲಿಕಾರ್ಜುನ, ಡಿ.ಕೆ.ಜವರಾಯ, ಶಿವಲಿಂಗಯ್ಯ, ಗೋವಿಂದರಾಜು, ಬಸ್ತಿಹಳ್ಳಿ ನಾಗೇಶ್, ಎಂ.ರವಿಕುಮಾರ್, ಜೆ.ಸ್ವಾಮಿ, ವಸಂತಕುಮಾರ್, ಅಲ್ಪಹಳ್ಳಿ ಮಂಜು, ಗುರುಕುಮಾರ್, ವದೇಸಮುದ್ರ ಮೋಹನಕುಮಾರ್ ಇತರರು ಇದ್ದರು.