ಮಂಡ್ಯದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಟ್ರಸ್ಟ್ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಆಯೋಜಿಸಿದ್ದರು. 
ಮಂಡ್ಯ

ಪುರುಷರ ಹಿತಕಾಯಲು ಟ್ರಸ್ಟ್ ಅಸ್ಥಿತ್ವಕ್ಕೆ: ಮಂಡ್ಯದವರಿಂದಲೇ ಪ್ರಾರಂಭವಾಯ್ತು ರಾಷ್ಟ್ರೀಯ ಘಟಕ

ಪ್ರಮುಖ ಮುಖ್ಯಾಂಶಗಳು

  • ಸಂಸ್ಥಾಪಕ ಅಧ್ಯಕ್ಷೆ ಕೆ.ಎನ್.ರಜನಿರಾಜ್ ನೇತೃತ್ವ
  • ಗೌರವಾಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ರಾಷ್ಟ್ರೀಯ ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಆಯ್ಕೆ
  • ಪುರುಷರ ಮೇಲೆ ದಾಖಲಾಗುವ ಸುಳ್ಳು ದೂರು ಪ್ರಕರಣಗಳ ವಿರುದ್ಧ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿರುವ ಟ್ರಸ್ಟ್
ಮಂಡ್ಯ: ಮಹಿಳೆಯರಿಂದ ದೌರ್ಜನ್ಯಕ್ಕೆ ಒಳಗಾದ ಪುರುಷರ ಹಿತಕಾಯುವ ಉದ್ದೇಶದಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಟ್ರಸ್ಟ್ ಅಸ್ಥಿತ್ವಕ್ಕೆ ತರಲಾಗಿದೆ ಎಂದು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷೆ ಕೆ.ಎನ್.ರಜನಿರಾಜ್ ತಿಳಿಸಿದರು.
ರಾಜ್ಯ ಸರ್ಕಾರದ ಕಾಯ್ದೆಯಡಿ 32 ಜನ ಪದಾಧಿಕಾರಿಗಳ ಸಮಿತಿಯೊಂದಿಗೆ ಟ್ರಸ್ಟ್ ನೋಂದಾಯಿಸಲಾಗಿದೆ. ಗೌರವಾಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ರಾಷ್ಟ್ರೀಯ ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೌರ್ಜನ್ಯ ನಿಗ್ರಹಕ್ಕೆ ಮಹಿಳೆಯರ ಸಂಘದಂತೆ ಪುರುಷರ ಹಿತರಕ್ಷಣೆಗೆಂದು ಸಮಿತಿ ರಚಿಸಲಾಗಿದೆ. ಪುರುಷರ ಮೇಲೆ ದಾಖಲಾಗುವ ಸುಳ್ಳು ದೂರು ಪ್ರಕರಣಗಳ ವಿರುದ್ಧ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಟ್ರಸ್ಟ್ ಕೆಲಸ ಮಾಡಲಿದೆ. ಪುರುಷ-ಮಹಿಳೆಯರ ನಡುವೆ ಸಾಮರಸ್ಯ ಉಂಟು ಮಾಡಿ ಇಬ್ಬರ ಭಾವನೆಗಳಿಗೆ ಪರಸ್ಪರ ಗೌರವ ನೀಡುವಂತೆ ಮನವರಿಕೆ ಮಾಡುವುದು. ಸುಖ ಸಂಸಾರ ಸ್ಥಾಪಿಸಿ ಉತ್ತಮ ಜೀವನ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಮಹಿಳಾ ಸಮಸ್ಯೆಗಳಿಗೆ ಮಹಿಳಾ ಆಯೋಗ ಇರುವಂತೆ ಪುರುಷರಿಗೂ ಸಹ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪುರುಷರ ಆಯೋಗ ರಚಿಸುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಜಿ.ಟಿ.ವೀರಪ್ಪ, ಕಾರ್ಯದರ್ಶಿ ಎಂ.ಆರ್.ಸತೀಶ್, ಖಜಾಂಚಿ ಜಿ.ಎಚ್.ವೇದವಲ್ಲಿ, ಸಂಘಟನಾ ಕಾರ್ಯದರ್ಶಿ ಎಚ್.ಎಂ.ಬಸವರಾಜು, ಮಾಧ್ಯಮ ಕಾರ್ಯದರ್ಶಿ ಬಿ.ಪಿ.ಪ್ರಕಾಶ್, ಕಾನೂನು ಸಲಹೆಗಾರ ಗುರುಪ್ರಸಾದ್, ಟ್ರಸ್ಟಿ ಕೃಷ್ಣೇಅರಸ್, ಸದಸ್ಯ ಚೇತನ್ ಇದ್ದರು.