ಪಾಂಡವಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರುಷ ಹಿತರಕ್ಷಣಾ ಸಮಿತಿ ಸದಸ್ಯರ ಸಭೆ ನಡೆಯಿತು. ಮಾಜಿ ಸಚಿವ ಅಡಗೂರು ವಿಶ್ವನಾಥ್, ಮಾಜಿ ಶಾಸಕ ಶ್ರೀಕಂಠೇಗೌಡ ಇದ್ದರು.
ಪಾಂಡವಪುರ: ಪುರುಷರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಿ, ರಕ್ಷಣೆ ನೀಡುವ ಉದ್ದೇಶದಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಮಾಜಿ ಸಚಿವರೂ ಆದ ಸಮಿತಿಯ ಗೌರವಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದರು.
ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗುರುವಾರ ಸಮಿತಿ ನೋಂದಾಯಿಸಿದ ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಿತಿ ಸದಸ್ಯರ ಸಭೆ ನಡೆಸಿ ಮಾತನಾಡಿದರು. ಪುರುಷ ಪ್ರಧಾನ ಸಮಾಜದಲ್ಲಿ ಪುರುಷರ ಮೇಲೆಯೇ ಸಾಕಷ್ಟು ದೌರ್ಜನ್ಯ, ಶೋಷಣೆಗಳು ನಡೆಯುತ್ತಿವೆ. ಸಾಕಷ್ಟು ಪುರುಷರು ತಮ್ಮ ಪತ್ನಿಯರಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅವುಗಳನ್ನು ತಡೆಗಟ್ಟಿ ಅದರ ವಿರುದ್ಧ ಹೋರಾಟ ಮಾಡಲು ಇಂತಹದೊಂದು ಸಂಘಟನೆ ಅವಶ್ಯಕತೆ ಇತ್ತು. ಮಂಡ್ಯದ ನೆಲದಿಂದಲೂ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ ರಚನೆಯಾಗಿದೆ. ಈ ಸಮಿತಿಗೆ ರಾಜಕೀಯ ವ್ಯಕ್ತಿಗಳು, ವಕೀಲರು ಸೇರಿದಂತೆ ಎಲ್ಲ ಕ್ಷೇತ್ರದಿಂದಲೂ ಸದಸ್ಯರನ್ನಾಗಿ ಮಾಡಿಕೊಂಡು ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಈ ಸಮಿತಿಯಲ್ಲಿ ಕೆಲಸ ಮಾಡುವವರು ಜಾತಿ-ಧರ್ಮ, ಪಕ್ಷಭೇದ ಮರೆತು ಕೆಲಸ ಮಾಡಬೇಕು. ಸಮಿತಿಯ ಉದ್ದೇಶಗಳು, ಗುರಿ ಸಂಬಂಧವಾಗಿ ಸರ್ಕಾರದೊಂದಿಗೂ ಚರ್ಚಿಸಿ ಅದರ ಸಹಕಾರ, ಜತೆಗೆ ಸಮಾಜಕಲ್ಯಾಣ ಇಲಾಖೆ ಸಹಕಾರ ಪಡೆದು ಕೆಲಸಮಾಡಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಪುರುಷರ ಹಕ್ಕುಗಳು, ರಕ್ಷಣೆಗಾಗಿ ನಿರ್ಮಾಣಗೊಂಡಿರುವ ಪ್ರಥಮ ಸಂಘಟನೆ ಇದಾಗಿದೆ. ಎಲ್ಲೇ ಪುರುಷರ ಮೇಲೆ ದೌರ್ಜನ್ಯ, ಶೋಷಣೆಗಳು ನಡೆದರೂ ಅವರು ದೂರು ನೀಡಿದರೆ ಅವರ ಪರವಾಗಿ ನಮ್ಮ ಸಂಘಟನೆ ಕೆಲಸ ಮಾಡಲಿದೆ. ದೇಶದಲ್ಲಿ ಸಾಕಷ್ಟು ಪುರುಷ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಪತ್ನಿ ಹಿಂಸೆ ತಾಳಲಾರದೆ ಯುವ ನ್ಯಾಯಾಧೀಶರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗೆ ಹಲವೆಡೆ ಪುರುಷರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ದೌರ್ಜನ್ಯಕ್ಕೆ ಒಳಗಾದ ಪುರುಷರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈಹಾಕಬಾರದು. ಅದನ್ನು ತಡೆದು ನ್ಯಾಯ ದೊರಕಿಸಿಕೊಡುವುದು ಇದರ ಉದ್ದೇಶವಾಗಿದೆ. ಸಮಿತಿಗೆ ಯಾರು ಬೇಕಾದರೂ ಸದಸ್ಯರಾಗಬಹುದು. ಸದಸ್ಯರಿಗೆ 2 ಸಾವಿರ ರೂ. ಸದಸ್ಯತ್ವದ ಶುಲ್ಕ ಇರಲಿದ್ದು, ದೂರು ನೀಡುವ ವ್ಯಕ್ತಿಗಳು 1 ಸಾವಿರ ಅರ್ಜಿ ಶುಲ್ಕ ಪಾವತಿಸಬೇಕು. ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಪುರುಷರಿಗೆ ಅನ್ಯಾಯವಾದರೆ ಅವದರ ವಿರುದ್ಧ ಈ ಸಮಿತಿ ಹೋರಾಟ ನಡೆಸಲಿದೆ ಎಂದರು.
ಸಮಿತಿಯ ಪದಾಧಿಕಾರಿ ವಕೀಲ ಗುರುಪ್ರಸಾದ್ ಮಾತನಾಡಿ, ಪುರುಷರು ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವ ಬಗ್ಗೆ ಪೊಲೀಸರಿಗೆ ದೂರು ನೀಡಿ ಸುಳ್ಳು ಪ್ರಕರಣ ದಾಖಲಿಸಿರುವುದರಲ್ಲಿ ಕರ್ನಾಟಕ ರಾಜ್ಯ ಮೂರನೇ ಸ್ಥಾನದಲ್ಲಿದೆ. ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದ ಪುರುಷರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಈ ಸಂಘಟನೆ ಪುರುಷರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.
ಸಂಸ್ಥಾಪಕ ಅಧ್ಯಕ್ಷೆ ರಜಿನಿ ರಾಜ್, ರಾಜ್ಯ ಉಪಾಧ್ಯಕ್ಷ ಎಂ.ಎನ್.ನಟರಾಜು, ಖಜಾಂಚಿ ವೇದಾವಲ್ಲಿ, ಸಹಕಾರ್ಯದರ್ಶಿ ಜಿ.ಟಿ.ವೀರಪ್ಪ, ಮಂಡ್ಯ ಜಿಲ್ಲಾಧ್ಯಕ್ಷ ಕೃಷ್ಣಾ ಅರಸು, ಉಪಾಧ್ಯಕ್ಷ ಮೈವಿವಿ ಮಾಜಿ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜೇಗೌಡ, ನಿರ್ದೇಶಕರಾದ ಚಿದಂಬರ್, ಕೊಪ್ಪಕುಮಾರ್, ಮೂಡ ಅಧ್ಯಕ್ಷ ಬಿ.ಪಿ.ಪ್ರಕಾಶ್, ಕೃಷ್ಣೇಗೌಡ, ತಗ್ಗಹಳ್ಳಿ ವೆಂಕಟೇಶ್, ಕಾನೂನು ಸಲಹೆಗಾರರಾದ ವಕೀಲ ಗುರುಪ್ರಸಾದ್, ನಿಂಗರಾಜು, ಬಸವರಾಜು, ಶಕುಂತಲಾ, ಅರವಿಂದ್, ನಿಶ್ಚಿತಗೌಡ, ಮೈಸೂರು ಕರವೇ ಅಧ್ಯಕ್ಷ ಆರ್.ಮೋಹನ್, ನಾಗೇಶ್ ನಾಯ್ಕ, ಜೈಲರ್ ಸತೀಶ್, ಪ್ರಮೀಳಾ, ಸೋಮಶೇಖರ್ ಇದ್ದರು.