ನಾಗಮಂಗಲ ತಾಲೂಕು ಬೆಳ್ಳೂರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. 
ಮಂಡ್ಯ

ಮಹಿಳೆಯರಿಗೆ ಶಕ್ತಿ ತುಂಬಲು ಗ್ಯಾರಂಟಿ ಜಾರಿ

ನಾಗಮಂಗಲ: ಮಹಿಳೆಯರು ಕುಟುಂಬದ ಕಣ್ಣಿದ್ದಂತೆ. ಅಂತಹ ತಾಯಿಗೆ ಹೆಚ್ಚು ಶಕ್ತಿ ಕೊಟ್ಟರೆ ಆ ಕುಟುಂಬ ಶಾಂತಿ, ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ 5 ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಬೆಳ್ಳೂರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಸೇರಿದಂತೆ ಬ್ಯಾಂಕ್‌ನ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರಪಂಚದಲ್ಲಿ ಸಂಪನ್ಮೂಲ ಕಡಿಮೆ ಇರುವ ದೇಶಗಳೂ ಬದಲಾವಣೆಯಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿವೆ. ಉಳಿದೆಲ್ಲ ರಾಷ್ಟ್ರಗಳಿಗಿಂತ ಭಾರತದಲ್ಲಿ ಸಂಪನ್ಮೂಲ ಹೆಚ್ಚಾಗಿದ್ದರೂ ನಮ್ಮ ಸ್ವಯಂ ಅಪರಾಧದಿಂದಾಗಿ ದೇಶದ ಅಭಿವೃದ್ಧಿ, ಶಿಸ್ತು ಹಾಗೂ ಸ್ವಚ್ಛತೆ ಕಡಿಮೆಯಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.
ದೇಶದ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ನೀಡಲಾಯಿತ್ತಾದರೂ ರಾಜ್ಯ ಕಾಂಗ್ರೆಸ್ ಸರ್ಕಾರವಷ್ಟೇ ಜನರಿಗೆ ಕೊಟ್ಟ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಸಮರ್ಪಕವಾಗಿ ಜನರಿಗೆ ತಲುಪಿಸುತ್ತಿದೆ. ಈಗಾಗಲೇ 25 ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಬಾಕಿಯಿರುವ ಎರಡು ತಿಂಗಳ ಕಂತಿನ ಪೈಕಿ ಒಂದು ತಿಂಗಳ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದರು.
ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ರೈತರಿಗೆ ಎಂಡಿಸಿಸಿ ಬ್ಯಾಂಕ್ ಮೂಲಕ ನೀಡುತ್ತಿದ್ದ 5 ಲಕ್ಷ ರೂ.ವರೆಗಿನ ಬಡ್ಡಿರಹಿತ ಸಾಲವನ್ನು 10 ಲಕ್ಷ ರೂ.ಗೆ ಏರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿ, ವರ್ಗ ಸೇರಿದಂತೆ ಎಲ್ಲ ವರ್ಗದ ರೈತರಿಗೆ ಶೇ.90 ರಿಯಾಯಿತಿ ದರದಲ್ಲಿ ಕೃಷಿ ಪರಿಕರಗಳನ್ನು ವಿತರಿಸಲು ಆದೇಶಿಸಲಾಗಿದೆ. ಇದನ್ನು ಜನರು ಯಾವಾಗ ಅರ್ಥೈಸಿಕೊಳ್ಳುವರೋ ಗೊತ್ತಿಲ್ಲ ಎಂದು ಹೇಳಿದರು.
ಚುನಾವಣೆ ದಿನದಂದು ಮತ ಹಾಕುವಾಗ ಯಾರು ಯೋಗ್ಯರು, ಯಾರಿಗೆ ಮತ ಹಾಕಿದರೆ ಜನರ ಹಿತಬಯಸುತ್ತಾರೆ, ಯಾರನ್ನು ಆಯ್ಕೆ ಮಾಡಿದರೆ ತಾಲೂಕು ನೆಮ್ಮದಿಯಿಂದಿರುತ್ತದೆ, ರಾಜ್ಯ ಮತ್ತು ರಾಷ್ಟ್ರ ಅಭಿವೃದ್ಧಿ ಹೊಂದುತ್ತದೆ ಎಂದು ಯೋಚಿಸಿ ಮತ ಹಾಕಬೇಕು. ಸುಳ್ಳು ಭರವಸೆ, ಆಮಿಷಗಳಿಗೆ ಒಳಗಾಗಿ ಅಸಮರ್ಥರಿಗೆ ಮತ ಹಾಕಿ ನಂತರ ಯೋಚಿಸಿದರೆ ಪ್ರಯೋಜನವಿಲ್ಲ. ಈಗಿರುವ ಗ್ಯಾರಂಟಿ ಯೋಜನೆಗಳು ಮುಂದೆಯೂ ಬೇಕೆಂದರೆ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಬೇಕು. ಕಾಂಗ್ರೆಸ್ ಬಿಟ್ಟು ಬೇರೆಯವರಿಗೆ ಮತ ಹಾಕಿದರೆ ನಿಮಗೆ ನೀವೇ ದ್ರೋಹ ಮಾಡಿಕೊಂಡಂತೆ ಎಂದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಕಳೆದ ಬಜೆಟ್‌ನಲ್ಲಿ ರಾಜ್ಯದ 38ಲಕ್ಷ ರೈತರಿಗೆ 28ಸಾವಿರ ಕೋಟಿ ರೂ. ಹಣವನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು. ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಸಹ 19ಲಕ್ಷಕ್ಕೂ ಹೆಚ್ಚು ರೈತರಿಗೆ 20 ಸಾವಿರ ಕೋಟಿ ರೂ.ಹಣವನ್ನು ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆಯಾಗಿದೆ. ಜಿಲ್ಲೆಯ 1.54 ಲಕ್ಷ ರೈತರಿಗೆ 1.100 ಕೋಟಿ ರೂ. ಶೂನ್ಯ ಬಡ್ಡಿದರದಲ್ಲಿ ವಿತರಣೆಯಾಗಿದೆ ಎಂದರು.
ರಾಜ್ಯಾದ್ಯಂತ ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ರೈತರನ್ನು ಹುರಿದುಂಬಿಸಿದ್ದಾರೆ. ಸುಮಾರು 82ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದು ನಿರೀಕ್ಷೆಯಂತೆ ಆಹಾರ ಧಾನ್ಯಗಳನ್ನು ಬೆಳೆದಿದ್ದಾರೆ. 38 ಸಾವಿರ ಕೋಟಿ ರೂ.ದುಡಿಯುವ ಬಂಡವಾಳ ಹೊಂದಿರುವ ಅಪೆಕ್ಸ್ ಬ್ಯಾಂಕ್ ರಾಜ್ಯದ ರೈತರಿಗೆ 10 ಸಾವಿರ ಕೋಟಿ ರೂ.ಗಳನ್ನು ಶೂನ್ಯ ಬಡ್ಡಿದರದಲ್ಲಿ ನಬಾರ್ಡ್‌ನಿಂದ ಕೊಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಕೇವಲ 2,800 ಕೋಟಿ ರೂ. ಮಾತ್ರ ಕೊಟ್ಟಿದೆ. ರೈತರ ನೆರವಿಗೆ ಕೇಂದ್ರ ಧಾವಿಸದಿದ್ದರೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯಸ್ವಾಮಿ ಅವರು ರಾಜ್ಯ ಸರ್ಕಾರದ ಬಂಡವಾಳದಿಂದಲೇ ರೈತರಿಗೆ ಸಾಲ ವಿತರಿಸಿದ್ದಾರೆ ಎಂದು ಹೇಳಿದರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಮಾತನಾಡಿ, ತಂದೆಗೆ ಬೆನ್ನೆಲುಬಾಗಿ ನಿಂತು ಅವರ ಒತ್ತಡವನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಸಹಕಾರ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದೇನೆ. ರಾಜ್ಯದ ಎಲ್ಲ ವರ್ಗಗಳ ಜನರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ 5 ಗ್ಯಾರಂಟಿಗಳ ಜತೆಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರೂ ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದ ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು. ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರಿಂದ ಅಹವಾಲು ಸ್ವೀಕರಿಸಲಾಯಿತು. ಇಲಾಖೆಗಳ ಅಧಿಕಾರಿಗಳಿಗೆ ಹಸ್ತಾಂತರಿಸಿದ ಸಚಿವರು ಕಾಲಮಿತಿಯೊಳಗೆ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು.
ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಮನ್‌ಮುಲ್ ಅಧ್ಯಕ್ಷ ಶಿವಕುಮಾರ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಎಚ್.ಬಿ.ರಾಮು, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ಡಿವೈಎಸ್‌ಪಿ ಬಿ.ಚಲುವರಾಜು, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ವನಜಾಕ್ಷಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮುಖಂಡರಾದ ಎನ್.ಲಕ್ಷ್ಮೀಕಾಂತ್, ಬಿ.ಎಲ್.ದೇವರಾಜು, ತ್ಯಾಗರಾಜು, ಮೂಡ್ಲೀಗೌಡ, ಪದ್ಮನಾಭ, ಶಿವಣ್ಣ, ಕೆ.ಸಿ.ಜೋಗಿಗೌಡ, ಹರೀಶ್, ಅಂಬರೀಷ್, ಸುನೀಲ್, ಎಚ್.ಟಿ.ಕೃಷ್ಣೇಗೌಡ, ಬಿ.ರಾಜೇಗೌಡ ಇದ್ದರು.